ಸ್ಯಾಂಡಲ್ವುಡ್ನಲ್ಲಿ ಸೀಕ್ವೆಲ್ ಸಿನಿಮಾಗಳ ಅಬ್ಬರ ಜೋರಾಗಿದೆ. ಕೆಲವು ಸಿನಿಮಾಗಳ ಸೀಕ್ವೆಲ್ಗಳು ಸಿನಿಪ್ರಿಯರ ಮನಸ್ಸು ಕದ್ದಿದ್ದರೆ, ಇನ್ನೂ ಕೆಲವು ಸೀಕ್ವೆಲ್ಗಳ ಮೊದಲ ಭಾಗದಷ್ಟು ಹಿಟ್ ಕಾಣದೆ ನೆಲಕಚ್ಚಿದ್ದೂ ಇದೆ. 2020ರಲ್ಲಿ ತೆರೆಗೆ ಬಂದಿದ್ದ 'ನಾನು ಮತ್ತು ಗುಂಡ' ಸಿನಿಪ್ರಿಯರನ್ನು ಭಾವನಾತ್ಮಕವಾಗಿ ಟಚ್ ಮಾಡಿತ್ತು. 'ಕಾಮಿಡಿ ಕಿಲಾಡಿಗಳು' ಎಂಬ ರಿಯಾಲಿಟಿ ಶೋದಲ್ಲಿ ವೀಕ್ಷಕರ ಗಮನ ಸೆಳೆದ ಪ್ರತಿಭೆ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ಅಭಿನಯಿಸಿರುವ ಸಿನಿಮಾ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ನಿರ್ದೇಶಕ ರಘು ಹಾಸನ್ 'ನಾನು ಮತ್ತು ಗುಂಡ' ಸಿನಿಮಾ ಸೀಕ್ವೆಲ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ 'ನಾನು ಮತ್ತು ಗುಂಡ 2' ಚಿತ್ರದ ಟೈಟಲ್ ಕೂಡ ನಿರ್ದೇಶಕರು ರಿವೀಲ್ ಮಾಡಿದ್ದರು. ಆದರೆ ನಂತರದಲ್ಲಿ ಚಿತ್ರದ ಹೀರೋ ಯಾರು ಅನ್ನೋದು ಗಾಂಧಿನಗರದಲ್ಲಿ ಚರ್ಚೆಯಾಗಿತ್ತು. ಆದರೆ ಆ ಎಲ್ಲಾ ಕುತೂಹಲಕ್ಕೀಗ ತೆರೆ ಬಿದ್ದಿದೆ. 'ಜೋಶ್' ಸಿನಿಮಾ ಖ್ಯಾತಿಯ ನಟ ರಾಕೇಶ್ ಅಡಿಗ 'ನಾನು ಮತ್ತು ಗುಂಡ 2' ಸಿನಿಮಾದ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.
ಈ ಚಿತ್ರದ ಮುಂದುವರೆದ ಭಾಗವಾಗಿ 'ನಾನು ಮತ್ತು ಗುಂಡ 2' ತಯಾರಾಗುತ್ತಿದ್ದು, ಬಹುತೇಕ ಹಳೆಯ ತಂಡವೇ ಕೆಲಸ ಮಾಡುತ್ತಿದೆ. ಮೊದಲ ಭಾಗದಲ್ಲಿ ಮರಣ ಹೊಂದಿದ್ದ ನಾಯಕ ಶಂಕರನಿಗೆ ಎರಡನೇ ಭಾಗದಲ್ಲಿ ಪುನರ್ಜನ್ಮವಾಗಿರುತ್ತದೆ. ಗೋವಿಂದೇ ಗೌಡ ಹಾಗೂ ನಾಯಿಯ ಪಾತ್ರದ ಮೂಲಕ ಚಿತ್ರಕಥೆ ಮುಂದುವರೆಯಲಿದೆ. ಸೋಷಿಯಲ್ ಕನ್ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.