ಡಾ. ರಾಜ್ ಕುಮಾರ್ ಅಭಿನಯದ ಒಂದೊಂದು ಸಿನಿಮಾಗಳು ಇವತ್ತಿಗೂ ಕೆಲ ಸಿನಿಮಾ ವಿತರಕರ ಪಾಲಿಗೆ ಜೇಬು ತುಂಬಿಸುತ್ತಿವೆ. ಇದೀಗ 1977ರಲ್ಲಿ ರಿಲೀಸ್ ಆಗಿದ್ದ ನಿರ್ದೇಶಕ ಭಾರ್ಗವ ನಿರ್ದೇಶನದ ದ್ವಾರಕೀಶ್ ನಿರ್ಮಾಣ ಮಾಡಿದ, ಡಾ. ರಾಜ್ ಕುಮಾರ್ ಮತ್ತು ಬಿ ಸರೋಜಾದೇವಿ ಅಭಿನಯದ ಸೂಪರ್ ಹಿಟ್ ಭಾಗ್ಯವಂತರು ಸಿನಿಮಾ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರ್ತಾ ಇದೆ.
ಹೊಸ ತಂತ್ರಜ್ಞಾನದಲ್ಲಿ ಅಂದರೆ ಸಿನಿಮಾಸ್ಕೋಪ್ 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪದಲ್ಲಿ ಭಾಗ್ಯವಂತರು ಸಿನಿಮಾ ಅಭಿಮಾನಿಗಳ ಮುಂದೆ ಬರುತ್ತಿದೆ. ಡಾ. ರಾಜ್ ಕುಮಾರ್ ಅಭಿಮಾನಿಯಾಗಿರೋ ವಿತರಕ ಮುನಿರಾಜು ಎಂ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ಸಿದ್ದತೆ ನಡೆಸಿದ್ದಾರೆ.