ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಸದ್ಯ ಅವರು 'ಲಾಲ್ ಸಲಾಂ' ಚಿತ್ರದ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿದ್ದು, ಸದ್ಯ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. 1993 ರಲ್ಲಿ ಬಾಂಬೆನಲ್ಲಿ (ಈಗ ಮುಂಬೈ) ನಡೆದ ಕೋಮುಗಲಭೆಗಳ ಮಧ್ಯೆ ತಲೈವಾ ನಡೆದುಕೊಂಡು ಹೋಗುತ್ತಿರುವುದು ಪೋಸ್ಟರ್ನಲ್ಲಿ ತೋರಿಸಲಾಗಿದೆ. ಈ ಪೋಸ್ಟರ್ ರಜನಿಕಾಂತ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ.
"ಎಲ್ಲರ ನೆಚ್ಚಿನ ಭಾಯ್ ಮುಂಬೈಗೆ ಮರಳಿದ್ದಾರೆ. ರಜನಿ ಮೊಯ್ದಿನ್ ಭಾಯ್ ಆಗಿ ಬರುತ್ತಿದ್ದಾರೆ" ಎಂಬ ಕ್ಯಾಪ್ಶನ್ ಜೊತೆ ಚಿತ್ರತಂಡ ಪೋಸ್ಟರ್ ಹಂಚಿಕೊಂಡಿದೆ. ರಜನಿಕಾಂತ್ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ತಲೈವಾ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸದ್ಯ ಈ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕ್ರಿಕೆಟ್ ಕಥಾಧಾರಿತ ಹಿನ್ನೆಲೆಯನ್ನು ಸಿನಿಮಾ ನಿರ್ಮಾಣವಾಗುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಪೋಸ್ಟರ್ ಅನ್ನು ಕೆಲವರು ಮೆಚ್ಚಿಕೊಂಡಿದ್ದು, ಇನ್ನು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, "ಇದೇನು? ನೀವು ತಲೈವಾಗೆ ಏನು ಮಾಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, "ದಯವಿಟ್ಟು ತೆಗೆಯಿರಿ, ಇದು ತುಂಬಾ ಕೆಟ್ಟ ಪೋಸ್ಟರ್" ಎಂದು ಹೇಳಿದ್ದಾರೆ. ಮತ್ತೊಬ್ಬರು, "ಕೆಟ್ಟ ಫೋಟೋಶಾಪ್" ಎಂದು ಬರೆದಿದ್ದಾರೆ. ಕೆಲವು ಅಭಿಮಾನಿಗಳು ತಲೈವಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಮತ್ತು ಯೋಜನೆಯು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. "ಇದಕ್ಕಾಗಿ ಕಾಯಲು ಸಾಧ್ಯವಿಲ್ಲ. ಆಸಕ್ತಿದಾಯಕವಾಗಿದೆ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.