ಚಿಕ್ಕಬಳ್ಳಾಪುರ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಚಿಕ್ಕಬಳ್ಳಾಪುರದಲ್ಲಿರುವ ಆದಿಯೋಗಿ ಪ್ರತಿಮೆ ಬಳಿ ಸದ್ದಿಲ್ಲದೇ ಭೇಟಿ ನೀಡಿ ಶಿವನ ದರ್ಶನ ಪಡೆದಿದ್ದಾರೆ. ಇಶಾ ಕೇಂದ್ರದ ಸದ್ಗುರು ಜಗ್ಗಿ ವಾಸುದೇವ್ ಅವರು ತಮಿಳುನಾಡಿನ ಕೊಯಮುತ್ತೂರು ಬಳಿ ಸ್ಥಾಪಿಸಿರುವ ಆದಿಯೋಗಿ ಮಾದರಿಯಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಬಳಿ 112 ಎತ್ತರದ ಆದಿಯೋಗಿ ಪ್ರತಿಮೆ ಇದೆ. ಪ್ರತಿಮೆಯನ್ನು ಆಂಧ್ರ ಗಡಿಭಾಗದಲ್ಲಿ ಸ್ಥಾಪಿಸಲಾಗಿದ್ದು, ಆಂಧ್ರ ಮತ್ತು ಕರ್ನಾಟಕದವರಿಗೆ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಮಕರ ಸಂಕ್ರಾಂತಿ ಹಬ್ಬದ ದಿನ ಚಿಕ್ಕಬಳ್ಳಾಪುರ ಬಳಿ ಅವಲಗುರ್ಕಿ ಸಮೀಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈ ಪ್ರತಿಮೆ ಲೋಕಾರ್ಪಣೆಗೊಂಡಿದೆ.
ಆದಿಯೋಗಿ ಶಿವನ ದರ್ಶನ ಪಡೆಯಲು ಸದ್ದಿಲ್ಲದೇ ಚಿಕ್ಕಬಳ್ಳಾಪುರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಶುಕ್ರವಾರ ಭೇಟಿ ನೀಡಿದ್ದರು. ತಮ್ಮ ಸಹೋದರನ ಜೊತೆ ಭೇಟಿ ಕೊಟ್ಟ ನಟ ಆದಿಯೋಗಿ ಶಿವನ ಮುಂದೆ ಪ್ರಾಥನೆ ಸಲ್ಲಿಸಿದರು. ಬಳಿಕ ಅಲ್ಲಿಂದ ವಾಪಸ್ ಆಗುವ ಸಂದರ್ಭದಲ್ಲಿ ಸ್ಥಳೀಯರು ನಟ ರಜನಿ ಅವರನ್ನು ಗುರುತಿಸಿದ್ದಾರೆ.
ವಿಶ್ವದ ಅತೀ ದೊಡ್ಡ ಆದಿಯೋಗಿ ಪ್ರತಿಮೆಯು ಪಕ್ಕದ ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿದೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಅದೇ ಮಾದರಿಯ ಪ್ರತಿಮೆ ಸ್ಥಾಪಿಸಲಾಗಿದೆ. 112 ಅಡಿ ಎತ್ತರವಿರುವ ಈ ಪ್ರತಿಮೆಯನ್ನು ಮಕರ ಸಂಕ್ರಾಂತಿಯ ಶುಭದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದಾರೆ. ಹಬ್ಬದ ದಿನದಂದೇ ಪ್ರತಿಮೆಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು. ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ಇರುವ ಈ ಆದಿಯೋಗಿ ಮೂರ್ತಿಯನ್ನು ಈಶ ಫೌಂಡೇಶನ್ ನಿರ್ಮಿಸಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ.
ಜೈಲರ್ ಸಿನಿಮಾದ ಚಿತ್ರೀಕರಣ ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿದ್ದ ಹಿನ್ನೆಲೆ ಕಳೆದ ಭಾನುವಾರ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ ಸುಮಾರ 9 ಗಂಟೆ ಸುಮಾರಿಗೆ ಕಾಣಿಸಿಕೊಂಡಿದ್ದರು.