ಬೆಂಗಳೂರು: ನಗರ ಸಾರಿಗೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸಿರುವ ರಜನಿಕಾಂತ್ ಸದ್ಯ ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಟ. ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು, ಸಾಕಷ್ಟು ಹೆಸರು ಸಂಪಾದಿಸಿರುವ ಬಹುಭಾಷಾ ನಟ ರಜನಿಕಾಂತ್ ಬದುಕು ಕಟ್ಟಿಕೊಳ್ಳಲು ವೃತ್ತಿಜೀವನ ಆರಂಭಿಸಿದ್ದ ಸ್ಥಳಕ್ಕೆ ಅಚ್ಚರಿಯ ಭೇಟಿ ಕೊಟ್ಟಿದ್ದಾರೆ. ಜೈಲರ್ ಯಶಸ್ಸಿನಲ್ಲಿರುವ ನಟನನ್ನು ಕಂಡ ಬೆಂಗಳೂರು ಸಾರಿಗೆ ಸಿಬ್ಬಂದಿ ಆಶ್ಚರ್ಯಚಕಿತರಾದರು. ಒಂದು ಕ್ಷಣ ತಮ್ಮನ್ನೇ ತಾವು ನಂಬದಂತಾದರು.
ಕೆಲಸ ನಿರ್ವಹಿಸಿದ ದಿನಗಳ ಮೆಲುಕು....ಶಾಂತಿನಗರ ಬಿಎಂಟಿಸಿ ಡಿಪೋ 4ಕ್ಕೆ ಇಂದು ಬೆಳಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಸರ್ಪೈಸ್ ವಿಸಿಟ್ ಕೊಟ್ಟರು. ಸಾರಿಗೆ ಸಿಬ್ಬಂದಿಯನ್ನು ಭೇಟಿ ಮಾಡಿ, ಅವರೊಂದಿಗೆ ತಾವು ಕೆಲಸ ನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದರು. ಈ ವೇಳೆ ಬಿಎಂಟಿಸಿ ಸಿಬ್ಬಂದಿ, ಅಧಿಕಾರಿ ವರ್ಗ ರಜನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಬಳಿಕ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ರಜನಿಕಾಂತ್ ಭೇಟಿಗಾಗಿ ಗಣ್ಯರು ಸಾಕಷ್ಟು ಸಮಯ ಕಾಯುತ್ತಾರೆ. ಅಂತಹದ್ದರಲ್ಲಿ ತಾವಿರುವ ಸ್ಥಳಕ್ಕೆ ಬಂದು ಭೇಟಿ ಮಾಡಿದ್ದಕ್ಕೆ ಬಿಎಂಟಿಸಿ ಸಿಬ್ಬಂದಿಗೆ ಅಚ್ಚರಿ ಜೊತೆಗೆ ಪರಮಾನಂದವಾಯಿತು. ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಬೆಂಗಳೂರಿನ ಮರಾಠಿ ಕುಟುಂಬದಲ್ಲಿ ಜನಿಸಿದ್ದ ರಜನಿಕಾಂತ್ ಜೀವನಕ್ಕಾಗಿ ಕೂಲಿ, ಕಾರ್ಪೆಂಟರ್ ವೃತ್ತಿ ಮಾಡಿದ್ದರು. ನಂತರ ಬೆಂಗಳೂರು ಸಾರಿಗೆ ಸೇವೆ ಬಸ್‌ನಲ್ಲಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಕಂಡಕ್ಟರ್ ವೃತ್ತಿ ಜೊತೆ ಜೊತೆಗೆ ನಾಟಕಗಳಲ್ಲಿಯೂ ನಟಿಸಿದ್ದರು. ಬಳಿಕ ಕಂಡಕ್ಟರ್ ವೃತ್ತಿಗೆ ಗುಡ್ ಬೈ ಹೇಳಿ ಸಿನಿ ರಂಗವನ್ನು ಸೇರಿಕೊಂಡರು. ಸದ್ಯ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ದೊಡ್ಡ ಮಟ್ಟದ ಹೆಸರು ಸಂಪಾದಿಸಿದ್ದಾರೆ.