'ಜೈಲರ್' ಯಶಸ್ಸಿನಲ್ಲಿರುವ ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಅವರ ಮುಂದಿನ 'ತಲೈವರ್ 170' ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಕಳೆದೆರಡು ದಿನಗಳಿಂದ ಚಿತ್ರ ತಯಾರಕರು ಸಿನಿಮಾ ಬಗೆಗಿನ ಕೆಲವೊಂದು ಅಪ್ಡೇಟ್ಸ್ಗಳನ್ನು ನೀಡುತ್ತಿದ್ದಾರೆ. ಬಹುಭಾಷಾ ತಾರೆಯರು ಸೇರಿದಂತೆ ಭಾರತೀಯ ಚಿತ್ರರಂಗದ ಹಿರಿಯ ನಟರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೀಗ ಮಲಯಾಳಂ ನಟ ಫಹಾದ್ ಫಾಸಿಲ್ ಹಾಗೂ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ 'ತಲೈವರ್ 170'ನ ಭಾಗವಾಗಿದ್ದಾರೆ ಎಂದು ಅಧಿಕೃತ ಘೋಷಣೆಯಾಗಿದೆ.
'ತಲೈವರ್ 170' ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಮಾಲಿವುಡ್ ರಂಗದ ಸ್ಟಾರ್ ನಟ ಫಹಾದ್ ಫಾಸಿಲ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟರ ಎಂಟ್ರಿ ಕುರಿತು ಪೋಸ್ಟ್ ಶೇರ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ಸೌತ್ ಸಿನಿಮಾ ರಂಗದ ಸ್ಟಾರ್ ಹೀರೋ ರಾಣಾ ದಗ್ಗುಬಾಟಿ ಅವರು ಕೂಡ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿತ್ತು.
ಕೊಚ್ಚಿಗೆ ತೆರಳಿದ ರಜನಿ: ರಜನಿಕಾಂತ್ ಅವರು ಈ ಸಿನಿಮಾದ ಶೂಟಿಂಗ್ಗಾಗಿ ಇಂದು ಕೊಚ್ಚಿಗೆ ತೆರಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಅವರು ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡರು. ಬಳಿಕ ಮಾತನಾಡಿದ ತಲೈವಾ, "ಮುಂದಿನ ಸಿನಿಮಾ ಶೂಟಿಂಗ್ಗಾಗಿ ಕೊಚ್ಚಿಗೆ ತೆರಳುತ್ತಿದ್ದೇನೆ. ಜೈಲರ್ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. ನನ್ನ 170ನೇ ಸಿನಿಮಾವನ್ನು ಟಿ.ಜೆ. ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಸಿನಿಮಾ ಒಂದೊಳ್ಳೆ ಸಂದೇಶದೊಂದಿಗೆ ದೊಡ್ಡ ಪರದೆಗೆ ಎಂಟ್ರಿಯಾಗಲಿದೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿರ್ಧಾರವಾಗಿಲ್ಲ" ಎಂದು ತಿಳಿಸಿದರು.