ಕರ್ನಾಟಕ

karnataka

ETV Bharat / entertainment

'ತಲೈವಾ' ರಜನಿಕಾಂತ್ ರಾಜಕೀಯದಿಂದ ದೂರ ಉಳಿಯಲು ಇದೇ ಕಾರಣವಂತೆ! - Rajinikanth politics life end

ರಾಜಕೀಯದಿಂದ ದೂರ ಉಳಿದುಕೊಂಡ ಬಗ್ಗೆ ತಲೈವಾ, ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು.

ರಜನಿಕಾಂತ್ ರಾಜಕೀಯದಿಂದ ದೂರ
ರಜನಿಕಾಂತ್ ರಾಜಕೀಯದಿಂದ ದೂರ

By

Published : Mar 12, 2023, 10:16 AM IST

ಚೆನ್ನೈ(ತಮಿಳುನಾಡು):ಸೂಪರ್​ಸ್ಟಾರ್ ರಜನಿಕಾಂತ್​ ತಮ್ಮ ಅದ್ಭುತ ನಟನೆಯಿಂದಲೇ ಜನಮಾನಸದಲ್ಲಿ ನೆಲೆಸಿದ್ದಾರೆ. ನಟನಾಗಿ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಿಪ್ಪ ರಜನಿ ರಾಜಕೀಯ ಕ್ಷೇತ್ರಕ್ಕೂ ಕಾಲಿಡುವ ಮಾತನಾಡಿದ್ದರು. ತಾವೇ ಹೊಸ ಪಕ್ಷವನ್ನು ಹುಟ್ಟುಹಾಕಿ ಜನಸೇವೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಕಾಲಾನಂತರ ರಜನಿ ರಾಜಕೀಯದಿಂದ ದೂರವೇ ಉಳಿದರು. ಇದಕ್ಕೆ ಕಾರಣ ನಿಗೂಢವಾಗಿತ್ತು. ಅದರ ಹಿಂದಿನ ರಹಸ್ಯವನ್ನು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ರಜನಿಕಾಂತ್​ ಅವರು 2020 ರ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮೊದಲು ತಮ್ಮನ್ನು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ತಲೈವಾ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ತದನಂತರ ತಾವೇ ಒಂದು ಪಕ್ಷವನ್ನು ರಚಿಸುವುದಾಗಿ ಘೋಷಣೆ ಕೂಡ ಮಾಡಿದ್ದರು. ಇದು ತಮಿಳು ರಾಜ್ಯದಲ್ಲಿ ರಾಜಕೀಯ ಬಿಸಿ ಏರಿಸಿತ್ತು. ಇನ್ನೊಬ್ಬ ಸಮಕಾಲೀನ ನಟ ಕಮಲ್​ ಹಾಸನ್​ ಕೂಡ ಇದೇ ವೇಳೆ ತಮ್ಮದೇ ಪಕ್ಷವನ್ನು ಘೋಷಿಸಿದ್ದರು.

ಅದರಂತೆ ರಜನಿ​ ಕೂಡ ಸ್ಥಳೀಯ ಪಕ್ಷವನ್ನು ಸಂಘಟಿಸಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್​ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಇದಾದ ಕೆಲ ದಿನಗಳ ಬಳಿಕ ಅವರು ರಾಜಕೀಯದಲ್ಲಿ ಕಾಣಿಸಿಕೊಳ್ಳಲಿಲ್ಲ. ನಟನೆಗೆ ಮಾತ್ರ ಅವರನ್ನು ಸೀಮಿತ ಮಾಡಿಕೊಂಡಿದ್ದ ರಜನಿ, ರಾಜಕೀಯದಿಂದ ದೂರ ಇರುವುದಾಗಿ ಸುಳಿವು ನೀಡಿದ್ದರು.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೇನೆ:ಇದೀಗ, ತಾವು ರಾಜಕೀಯಕ್ಕೆ ಬರುವುದಿಲ್ಲ. ತಮಗಿರುವ ಆರೋಗ್ಯ ಸಮಸ್ಯೆಗಳೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಲೈವಾ ಈ ಬಗ್ಗೆ ಹೇಳಿಕೆ ನೀಡಿದ್ದು, ಕಿಡ್ನಿ ಸಂಬಂಧಿ ಸಮಸ್ಯೆಯಿಂದ ವೈದ್ಯರ ಸಲಹೆಯ ಮೇರೆಗೆ ರಾಜಕೀಯ ತೊರೆದಿದ್ದೇನೆ ಎಂದು ಬಹಿರಂಗಪಡಿಸಿದರು.

"ನನ್ನ ರಾಜಕೀಯ ಜೀವನದ ಕುರಿತು ನಾನು ತೆಗೆದುಕೊಂಡ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಮೂತ್ರಪಿಂಡ ಸಮಸ್ಯೆಯಿಂದ ನಾನು ಬಳಲುತ್ತಿದ್ದೇವೆ. ಕಿಡ್ನಿ ಕಸಿ ಮಾಡಿಸಿಕೊಂಡಿದ್ದೇನೆ. ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ವಿಶ್ವಾದ್ಯಂತ ಎರಡನೇ ಹಂತದ ಕೋವಿಡ್ ಸೋಂಕಿನ ಅಲೆಯ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿದೆ. ಅವರು ಜನಸಂಪರ್ಕದಿಂದ ದೂರ ಇರಲು ಸಲಹೆ ನೀಡಿದರು. ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿರುವ ಕಾರಣ ನನ್ನ ರಾಜಕೀಯ ಪ್ರವೇಶವನ್ನು ಅವರು ಬಲವಾಗಿ ವಿರೋಧಿಸಿದರು."

ಜನಸಂಪರ್ಕದಿಂದ ಆರೋಗ್ಯಕ್ಕೆ ತೊಂದರೆ: "ರಾಜಕೀಯ ಪ್ರಚಾರದ ವೇಳೆ ಜನರ ಸಂಪರ್ಕದಿಂದ ದೂರ ಇರಲು ಸಾಧ್ಯವಿಲ್ಲ. ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ಆಯೋಜಿಸುವಾಗ ಜನರು ಒಟ್ಟುಗೂಡುತ್ತಾರೆ. ಇದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವೈದ್ಯರು ಸಾಧ್ಯವಾದಷ್ಟು ಜನಸಂದಣಿಯಿಂದ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದರಿಂದ, ನಾನು ರಾಜಕೀಯ ತೊರೆಯಬೇಕಾಯಿತು" ಎಂದು ಅವರು ರಹಸ್ಯ ಬಾಯ್ಬಿಟ್ಟಿದ್ದಾರೆ.

''2010 ರಲ್ಲಿಯೇ ಅವರನ್ನು ಭೇಟಿಯಾದಾಗ ಪಡೆದ ಚಿಕಿತ್ಸೆ ತೃಪ್ತಿದಾಯಕವಾಗಿರಲಿಲ್ಲ. ಕಿಡ್ನಿ ಈಗಾಗಲೇ ಶೇ.60ರಷ್ಟು ಹಾಳಾಗಿರುವುದು ಕಂಡುಬಂದಿದೆ. ಆಗ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅಮೆರಿಕದ ರೋಚೆಸ್ಟರ್‌ನ ಮೇಯೊ ಕ್ಲಿನಿಕ್‌ನಲ್ಲಿ ಕಸಿ ಮಾಡಿಕೊಂಡೆ. ಸೆಲೆಬ್ರಿಟಿಯಾಗಿಯೂ ನನಗೆ ಹಲವು ಸಮಸ್ಯೆಗಳಿವೆ. ಅದಕ್ಕಾಗಿಯೇ ನಾನು ಬಲವಂತವಾಗಿ ವಿದೇಶದಲ್ಲಿ ಚಿಕಿತ್ಸೆಗೆ ಒಳಗಾದೆ. ಇದು ನನ್ನನ್ನು ರಾಜಕೀಯದಿಂದ ದೂರವುಳಿಯಲು ಕಾರಣವಾಯಿತು" ಎಂದು ರಜನಿ ಸ್ಪಷ್ಟಪಡಿಸಿದ್ದಾರೆ.

ರಜನಿ ರಾಜಕೀಯ ಹಾದಿ..:ಸೂಪರ್​ಸ್ಟಾರ್ ರಜನಿಕಾಂತ್ ಅವರು 2020 ರ ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ರಾಜಕೀಯಕ್ಕೆ ಅಡಿ ಇಟ್ಟಿದ್ದರು. ಅಭಿಮಾನಿಗಳು ಮತ್ತು ಜನರು ಅವರನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸಿದ್ದರು. ಬೇರೆ ಪಕ್ಷಗಳಿಗೆ ಸೇರಿಕೊಳ್ಳುತ್ತಾರೆ ಎಂದು ವರದಿಯಾಗಿದ್ದವು. ಆ ಬಳಿಕ ತಾವೇ ಪಕ್ಷ ಕಟ್ಟುವುದಾಗಿ ಬಹಿರಂಗಪಡಿಸಿದ್ದರು. ಆ ನಿರ್ಧಾರ ಕೈಗೊಂಡ ಕೆಲವು ದಿನಗಳ ನಂತರ ಅವರೇ ಅನಾರೋಗ್ಯ ಕಾರಣದಿಂದ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರು.

ಇದು ಅವರ ಅಭಿಮಾನಿಗಳು ಮತ್ತು ಬೆಂಬಲಿಗರಲ್ಲಿ ತೀವ್ರ ನಿರಾಸೆ ಮೂಡಿಸಿತ್ತು. ಅವರು ತಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಎಂದು ಭಾವಿಸಿದ್ದ ಬಿಜೆಪಿಗೂ ತಲೈವಾ ನಿರ್ಧಾರ ಶಾಕ್​ ನೀಡಿತ್ತು. ಇದರ ನಂತರವೂ ತಲೈವಾ ರಾಜಕೀಯ ಮರುಪ್ರವೇಶ ಮಾಡಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳು ಬಂದಿದ್ದವು. ಆದರೀಗ ಆ ಎಲ್ಲ ವದಂತಿಗಳಿಗೆ ತೆರೆ ಬಿದ್ದಿದೆ.

ಇದನ್ನೂ ಓದಿ:ಒಡಿಶಾ: ಎರಡೇ ತಿಂಗಳಲ್ಲಿ 59 ಹೆಚ್‌3ಎನ್‌2 ಸೋಂಕು ಪ್ರಕರಣಗಳು ಪತ್ತೆ

ABOUT THE AUTHOR

...view details