ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಆಗಸ್ಟ್ 10ರಂದು ತೆರೆಗಪ್ಪಳಿಸಿದೆ. ಸಿನಿಮಾ ಕೋಟಿಗಟ್ಟಲೆ ಹಣ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ತೆರೆಕಂಡು 20 ದಿನಗಳಾದರೂ ಹಲವೆಡೆ ಇನ್ನೂ ಉತ್ತಮ ಪ್ರದರ್ಶನ ಮುಂದುವರೆಸಿದೆ. ಹಿರಿಯ ನಟನ ಅಮೋಘ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಜೈಲರ್ ಬಿಡುಗಡೆಯಾದ 22 ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 328 ಕೋಟಿ ರೂ.ಗೂ ಅಧಿಕ ಹಣ ಗಳಿಸಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸುಮಾರು 650 ಕೋಟಿ ರೂ. ಬಾಚಿಕೊಂಡಿದೆ. ಇನ್ನೂ ಹಲವೆಡೆಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ, ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ರಜನಿಕಾಂತ್ ಎಂದು ಸಿನಿಮಾ ವ್ಯವಹಾರ ನಡೆಸುವ ವಿಶ್ಲೇಷಕರು ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ Xನಲ್ಲಿ (ಹಿಂದಿನ ಟ್ವಿಟರ್) ರಜನಿಕಾಂತ್ ಅವರಿಗೆ ಸಂಬಂಧಪಟ್ಟ ಮಾಹಿತಿ ಶೇರ್ ಮಾಡಿದ್ದಾರೆ. ಸನ್ ಗ್ರೂಪ್ನ ಕಲಾನಿಧಿ ಮಾರನ್ ಮತ್ತು ರಜನಿಕಾಂತ್ ಫೋಟೋ ಹಂಚಿಕೊಂಡ ಮನೋಬಾಲಾ, ''ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರಿಗೆ ಹಸ್ತಾಂತರಿಸಿದ ಲಕೋಟೆಯಲ್ಲಿ 100 ಕೋಟಿ ರೂ. ಮೊತ್ತದ ಒಂದು ಆದಾಯ ಹಂಚಿಕೆ (profit sharing) ಚೆಕ್ ಇದೆ. ಸಿಟಿ ಯೂನಿಯನ್ ಬ್ಯಾಂಕ್, ಮಂಡವೇಲಿ ಬ್ರ್ಯಾಂಚ್, ಚೆನ್ನೈನಿಂದ ಈ ಹಣ ವರ್ಗಾವಣೆ ಆಗಲಿದೆ. ಜೈಲರ್ ಲಾಭ ಹಂಚಿಕೆಯ ಚೆಕ್ ಇದು. ಈಗಾಗಲೇ ರಜನಿಗೆ ಈ ಸಿನಿಮಾಗಾಗಿ ಸುಮಾರು 110 ಕೋಟಿ ರೂ. ಸಂಭಾವನೆ ಕೊಡಲಾಗಿದೆ. ಹಿರಿಯ ನಟ ಒಟ್ಟು 210 ಕೋಟಿ ರೂ. ಪಡೆದಿದ್ದಾರೆ. ಸೂಪರ್ ಸ್ಟಾರ್ ಇದೀಗ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟನಾಗಿ ಹೊರಹೊಮ್ಮಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.