ಇತ್ತೀಚೆಗಷ್ಟೇ ವಿಶ್ವ ಪ್ರತಿಷ್ಠಿತ ಆಸ್ಕರ್ 2023 ಸಮಾರಂಭ ಮುಗಿಸಿ ವಿಜೇತರು ತಾಯ್ನಾಡಿಗೆ ಮರಳಿದ್ದಾರೆ. ಆರ್‌ಆರ್‌ಆರ್ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರು 95ನೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ತಮಗೆ ಮತ್ತು ಪತ್ನಿ ರಮಾ, ಪುತ್ರ ಎಸ್‌ಎಸ್ ಕಾರ್ತಿಕೇಯ, ನಾಯಕ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮತ್ತು ರಾಮ್ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅವರಿಗೆ ಪ್ರವೇಶ ಟಿಕೆಟ್ ಪಡೆಯಲು ಭಾರಿ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಆಸ್ಕರ್ ನಾಮನಿರ್ದೇಶಿತರು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾತ್ರ ಆಸನಗಳನ್ನು ಹಂಚಿಕೆ ಮಾಡುವ ಅಕಾಡೆಮಿಯ ನಿಯಮವನ್ನು ಅನುಸರಿಸಿ ನಿರ್ದೇಶಕ ರಾಜಮೌಳಿ ಅವರು ಟಿಕೆಟ್ ಖರೀದಿಸಬೇಕಾಯಿತು. ಆಸ್ಕರ್ ನಾಮನಿರ್ದೇಶಿತರಾದ ನಾಟು ನಾಟು ಹಾಡಿನ ಸಾಹಿತಿ ಚಂದ್ರಬೋಸ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಸಂಗೀತ ಸಂಯೋಜಕ ಕೀರವಾಣಿ ಮತ್ತು ಅವರ ಪತ್ನಿಗೆ ಉಚಿತ ಪಾಸ್ ನೀಡಲಾಗಿದೆ.
ಅಕಾಡೆಮಿ ನಿಯಮದ ಪ್ರಕಾರ ಬಹುಮಾನವನ್ನು ಸ್ವೀಕರಿಸುವವರಿಗೆ ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಮಾತ್ರ ಉಚಿತ ಪಾಸ್ ನೀಡಲಾಗುತ್ತದೆ. ಉಳಿದಂತೆ ಸಮಾರಂಭದ ನೇರಪ್ರಸಾರ ವೀಕ್ಷಿಸಲು ಎಲ್ಲರೂ ಟಿಕೆಟ್ ಖರೀದಿಸಬೇಕು. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್ 2023ರ ಸಮಾರಂಭದಲ್ಲಿ ಭಾಗವಹಿಸಲು ಒಬ್ಬ ವ್ಯಕ್ತಿಗೆ ಸುಮಾರು 20.6 ಲಕ್ಷ ರೂ. ವೆಚ್ಚದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ತಮಗಾಗಿ ಮತ್ತು ತಂಡದ ಪ್ರಮುಖ ಸದಸ್ಯರಿಗೆ ಪಾಸ್‌ಗಳನ್ನು ಖರೀದಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಐತಿಹಾಸಿಕ ಕ್ಷಣವನ್ನು ಲೈವ್ ಆಗಿ ವೀಕ್ಷಿಸಲು ರಾಜಮೌಳಿ ಅವರು ಒಟ್ಟು 1.44 ಕೋಟಿ ರೂ. ಖರ್ಚು ಮಾಡಿದ್ದಾರೆ.