ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸಿ, ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆಯನ್ನು ಬಹಿರಂಗಗೊಳಿಸಿತು. 'ಕಲ್ಕಿ 2898 ಎಡಿ' ('Kalki 2898 AD') ಎಂದು ಟೈಟಲ್ ಇಡಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ. ಸಿನಿಮಾದ ಮೊದಲ ನೋಟವು ಪ್ರೇಕ್ಷಕರು, ಚಲನಚಿತ್ರ ತಾರೆಯರು ಮತ್ತು ನಿರ್ದೇಶಕರ ಗಮನ ಸೆಳೆಯುತ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.
ಇದೀಗ ಆರ್ಆರ್ಆರ್ ಖ್ಯಾತಿಯ ನಿರ್ದೇಶಕ ಎಸ್ಎಸ್ ರಾಜಮೌಳಿ ಕಲ್ಕಿ ಚಿತ್ರತಂಡ, ನಿರ್ದೇಶಕ ನಾಗ್ ಅಶ್ವಿನ್ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಅನ್ನು ಕೊಂಡಾಡಿದ್ದಾರೆ. ಉತ್ತಮ ಕೆಲಸ ಮಾಡಿರುವುದಾಗಿ ಹೊಗಳಿದ್ದಾರೆ. "ಇಂತಹ ಚಿತ್ರಗಳನ್ನು ಮಾಡುವುದು ದೊಡ್ಡ ಕೆಲಸ. ಆದರೆ ನೀವು ಅದನ್ನು ಮಾಡಿದ್ದೀರಿ. ಡಾರ್ಲಿಂಗ್ (ಪ್ರಭಾಸ್) ಆಕರ್ಷಕವಾಗಿ ಕಂಡಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಯಾವಾಗ ಎಂಬ ಪ್ರಶ್ನೆ ಮಾತ್ರ ಉಳಿದಿದೆ" ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಯಾಗಿ ನಿರ್ದೇಶಕ ನಾಗ್ ಅಶ್ವಿನ್ ಧನ್ಯವಾದ ಹೇಳಿದರು. ರಾಜಮೌಳಿ ಟ್ವೀಟ್ ಗೆ ಖ್ಯಾತ ನಿರ್ದೇಶಕರು, ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ. 'ಬಾಹುಬಲಿ' ನಿರ್ಮಾಪಕ ಶೋಭು ಯರ್ಲಗಡ್ಡ ಅವರು 'ನೋಡಿ, ಬಿಡುಗಡೆ ದಿನಾಂಕ ಯಾರು ಕೇಳುತ್ತಿದ್ದಾರೆ' ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಮರು ಟ್ವೀಟ್ ಮಾಡಿರುವ ನಿರ್ದೇಶಕ ಹರೀಶ್ ಶಂಕರ್, 'ಹಾ..ಹಾ.. ಚೆನ್ನಾಗಿ ಹೇಳಿದ್ದೀರಿ ಶೋಭು ಅವ್ರೇ' ಎಂದು ಉತ್ತರಿಸಿದ್ದಾರೆ. ಪ್ರಭಾಸ್ ಅವರು ಒಂದು ಸಿನಿಮಾವನ್ನು ಒಂದು ವರ್ಷ ಶೂಟಿಂಗ್ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ, ಬಿಡುಗಡೆ ದಿನಾಂಕದ ಬಗ್ಗೆ ಟ್ವೀಟ್ ಮಾಡಿದಾಗ ಎಲ್ಲರೂ ಅವರನ್ನು ಕಾಲೆಳೆದಿದ್ದಾರೆ.