ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ ದಿನ ಸಮೀಪಿಸುತ್ತಿದೆ. ಇದೀಗ ದೇಶದಲ್ಲೂ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಕರ್ನಾಟಕದಲ್ಲಿ 'ಸಲಾರ್' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿತ್ತು. ಇಂದು ತೆಲಂಗಾಣದಲ್ಲಿ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ತೆಲುಗು ರಾಜ್ಯದಲ್ಲಿ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರು ಖರೀದಿಸಿದ್ದಾರೆ.
ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ದೊಡ್ಡ ಮಟ್ಟಿಗೇ ಇದೆ. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಬಹಳ ಸಮಯದಿಂದಲೇ ಕಾತರರಾಗಿದ್ದಾರೆ. ಹಲವು ಬಾರಿ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದ್ದು, ಅಂತಿಮವಾಗಿ ''ಸಲಾರ್ ಭಾಗ 1'' 2023ರ ಕ್ರಿಸ್ಮಸ್ ಸಂದರ್ಭ ರಿಲೀಸ್ ಆಗಲಿದೆ.
ತೆಲಂಗಾಣದಲ್ಲಿ ಫಸ್ಟ್ ಟಿಕೆಟ್ ಸೋಲ್ಡ್ ಔಟ್:ಇದೀಗ ತೆಲುಗು ರಾಜ್ಯದಲ್ಲಿ ಸಲಾರ್ ಚಿತ್ರದ ಮೊದಲ ಟಿಕೆಟ್ ಮಾರಾಟವಾಗಿದೆ. ಈ ಬಹುನಿರೀಕ್ಷಿತ ಚಿತ್ರದ ಮೊದಲ ಟಿಕೆಟ್ ಅನ್ನು ಖರೀದಿಸಿದ್ದು ಬೇರೆ ಯಾರೂ ಅಲ್ಲ, ಬಾಹುಬಲಿ ಖ್ಯಾತಿಯ ಹಿರಿಯ ನಿರ್ದೇಶಕ ಎಸ್.ಎಸ್ ರಾಜಮೌಳಿ. ಹೌದು, ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ಗೆ ಆ್ಯಕ್ಷನ್ ಕಟ್ ಹೇಳಿದ್ದ ಲೆಜೆಂಡರಿ ನಿರ್ದೇಶಕರು ಸಲಾರ್ ಚಿತ್ರದ ಮೊದಲ ಟಿಕೆಟ್ ಖರೀದಿಸಿ ಗಮನ ಸೆಳೆದಿದ್ದಾರೆ. ಈ ವಿಚಾರವನ್ನು ಸ್ವತಃ ಸಲಾರ್ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
ಖ್ಯಾತ ತೆಲುಗು ಚಲನಚಿತ್ರ ವಿತರಣಾ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದೆ. ಎಸ್ಎಸ್ ರಾಜಮೌಳಿ ಅವರು ನಿಜಾಮ್ ಪ್ರದೇಶದಲ್ಲಿ (ತೆಲಂಗಾಣ, ಹೈದರಾಬಾದ್) ಸಿನಿಮಾ ವೀಕ್ಷಿಸಲು ನಮ್ಮಿಂದ ಸಲಾರ್‌ನ ಉದ್ಘಾಟನಾ ಟಿಕೆಟ್ ಅನ್ನು ಖರೀದಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ರಾಜಮೌಳಿ ಅವರು ಸಲಾರ್‌ನ ಮೊದಲ ಶೋಗಾಗಿ (7AM) ಟಿಕೆಟ್ ಪಡೆದಿರುವ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಜಮೌಳಿ ಜೊತೆಗೆ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಪ್ರಶಾಂತ್ ನೀಲ್, ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ.