ಹೈದರಾಬಾದ್: ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾಗಿ 2021ರಲ್ಲಿ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದ ಸಮಯವನ್ನು ಮೆಲುಕು ಹಾಕಿದ್ದಾರೆ. ಈ ಸಮಯದಲ್ಲಿ ತನ್ನ ಪತ್ನಿಯ ಅಚಲ ಬೆಂಬಲ ತನಗೆ ನಿರ್ಣಯಕವಾಗಿತ್ತು ಎಂದು ಹೇಳಿದ್ದಾರೆ.
ಕುಂದ್ರಾ ಅವರು ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ತಡೆಗಟ್ಟುವಿಕೆ) ಕಾಯಿದೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಕಾನೂನು ಕ್ರಮ ಎದುರಿಸಿದ್ದರು. ಸೆಪ್ಟೆಂಬರ್ 2021 ರಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ತಮ್ಮ ಜೈಲು ಅನುಭವದಿಂದ ಸ್ಫೂರ್ತಿ ಪಡೆದ 'ಯುಟಿ 69' ಎಂಬ ಸಿನಿಮಾದ ಮೂಲಕ ರಾಜ್ ಕುಂದ್ರಾ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗೆ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ರಾಜ್ ಕುಂದ್ರಾ ಮಾತನಾಡಿ, "ನಾನು ಜೈಲಿನಲ್ಲಿದ್ದಾಗ, ವಾರಕ್ಕೊಮ್ಮೆ ಮಾತ್ರ ಫೋನ್‌ನಲ್ಲಿ ಕೆಲವೇ ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿತ್ತು. ಅದಕ್ಕಾಗಿಯೇ ಶಿಲ್ಪಾ ಮತ್ತು ನಾನು ಪರಸ್ಪರ ಪತ್ರಗಳನ್ನು ಬರೆಯುತ್ತಿದ್ದೆವು. ನಾನು ಅವಳ ಪತ್ರಗಳನ್ನು ಓದುತ್ತಿದ್ದೆ ಮತ್ತು ಹೊರಗೇನು ನಡೆಯುತ್ತಿದೆ ಎಂದು ತಿಳಿದುಕೊಳ್ಳುತ್ತಿದ್ದೆ. ಶಿಲ್ಪಾಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ನನ್ನ ವ್ಯವಹಾರದಲ್ಲಿ, ನನ್ನ ಜೀವನದಲ್ಲಿ ನಾನು ಎಷ್ಟು ಪ್ರಾಮಾಣಿಕನಾಗಿದ್ದೇನೆ ಮತ್ತು ನಾನು ಯಾವ ರೀತಿಯ ಕಾರ್ಯವಿಧಾನಗಳನ್ನು ಅನುಸರಿಸುತ್ತೇನೆ ಎಂಬುದರ ಬಗ್ಗೆ ತಿಳಿದಿದೆ. ಶಿಲ್ಪಾರಿಂದ ನನಗೆ ತುಂಬಾ ಬೆಂಬಲ ಸಿಕ್ಕಿದೆ" ಎಂದಿದ್ದಾರೆ.