ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರ ಬಂದ ರಾಜ್ ಕುಂದ್ರಾ, ಮುಂಬೈ ಪೊಲೀಸರ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಅಧಿಕಾರಿಗಳು ನನಗೆ ಮೋಸ ಮಾಡಿದ್ದಾರೆ ಎಂದು ರಾಜ್ ಕುಂದ್ರಾ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ ಕುಂದ್ರಾ ಸಿಬಿಐಗೆ ದೂರು ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ ಕುಂದ್ರಾ ಮನವಿ ಮಾಡಿದ್ದಾರೆ. ಅವರು ಸಿಬಿಐಗೆ ನೀಡಿರುವ ದೂರಿನಲ್ಲಿ ಅಧಿಕಾರಿಗಳ ಬಗ್ಗೆ ಹೆಸರಿಸಿದ್ದಾರೆ. ಇದರೊಂದಿಗೆ ಪ್ರಧಾನಿ ಕಾರ್ಯಾಲಯಕ್ಕೂ ಪತ್ರ ಬರೆದು ಈ ವಿಚಾರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಅಲ್ಲದೇ ಯಾವುದೇ ಅಶ್ಲೀಲ ಚಿತ್ರ ನಿರ್ಮಾಣಕ್ಕೂ ಮತ್ತು ಯಾವುದೇ ಆರೋಪಿಗಳೊಂದಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ ಸ್ಪಷ್ಟಪಡಿಸಿದ್ದಾರೆ.
ಕುಂದ್ರಾ ಅವರ ದೂರಿನಲ್ಲಿ ಮುಂಬೈ ಅಪರಾಧ ವಿಭಾಗದ ಕೆಲವು ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳಿವೆ. ಈ ಪ್ರಕರಣದಲ್ಲಿ ದಾಖಲಾಗಿರುವ ಮೂಲ ಚಾರ್ಜ್ ಶೀಟ್ನಲ್ಲಿ ತನ್ನ ಹೆಸರು ಇಲ್ಲದಿದ್ದರೂ ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಪೊಲೀಸರು ಶತಾಯಗತಾಯ ಯತ್ನಿಸಿದ್ದಾರೆ ಎಂದು ರಾಜ್ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಮತ್ತೆ ಮುನ್ನೆಲೆಗೆ ಬಂದ ಅಪ್ಪು ಪಪ್ಪು ಖ್ಯಾತಿಯ ಸ್ನೇಹಿತ್ ಕಿರಿಕ್.. ದೂರು - ಪ್ರತಿದೂರು ದಾಖಲು!