ಹಿಂದಿ ಚಿತ್ರರಂಗದ ಸುಂದರ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಪ್ರಕರಣದಲ್ಲಿ ಸಿಲುಕಿದ್ದ ರಾಜ್ ಕುಂದ್ರಾ ಜೈಲಿನಿಂದ ಹೊರಬಂದ ನಂತರ ಕಂಪ್ಲೀಟ್ ಫೇಸ್ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದರು. ಇದೇ ಮೊದಲ ಬಾರಿಗೆ ರಾಜ್ ಕುಂದ್ರಾ ಮಾಸ್ಕ್ ಇಲ್ಲದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದೃಶ್ಯವೂ ಕಂಡುಬಂತು.
ಉದ್ಯಮಿ ರಾಜ್ ಕುಂದ್ರಾ ಅವರು ತಮ್ಮ ಚೊಚ್ಚಲ ಸಿನಿಮಾ 'UT 69'ನ ಟ್ರೇಲರ್ ಅನ್ನು ಬುಧವಾರ ಅನಾವರಣಗೊಳಿಸಿದ್ದಾರೆ. ಟ್ರೇಲರ್ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿದೆ. ಟ್ರೇಲರ್ ಬಿಡುಗಡೆಯಾದ ಮರುದಿನ, ಅಂದರೆ ಗುರುವಾರ, ರಾಜ್ ಕುಂದ್ರಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಪಾಪರಾಜಿಗಳು ಕ್ಯಾಮರಾ ಕಣ್ಣಲ್ಲಿ ಖ್ಯಾತ ಉದ್ಯಮಿ ಸೆರೆಯಾಗಿದ್ದು, ಫೇಸ್ ಮಾಸ್ಕ್ ಇಲ್ಲದೇ ಕಾಣಿಸಿಕೊಂಡಿದ್ದಾರೆ. ಪಾಪರಾಜಿಯೋರ್ವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ, ರಾಜ್ ಕುಂದ್ರಾ ಅವರ 'ವಿದೌಟ್ ಮಾಸ್ಕ್' ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ರಾಜ್ ಕುಂದ್ರಾ ಬ್ಲ್ಯಾಕ್ ಟೀ ಶರ್ಟ್ ಆ್ಯಂಡ್ ಬ್ಲ್ಯೂ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸನ್‌ಗ್ಲಾಸ್, ಬ್ಯಾಗ್‌ನೊಂದಿಗೆ ರಾಜ್ ತಮ್ಮ ಹ್ಯಾಂಡ್ಸಮ್ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾ ಯೂಸರ್ಸ್ ರಿಯಾಕ್ಷನ್ ಕೊಡಲು ಪ್ರಾರಂಭಿಸಿದ್ದಾರೆ. 'ಪ್ರತೀ ಮನುಷ್ಯನು ತಪ್ಪು ಮಾಡುತ್ತಾನೆ, ಆದ್ರೆ ಆ ಮನುಷ್ಯನೇ ತಪ್ಪು ಎಂದು ಅರ್ಥವಲ್ಲ' ಎಂದು ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.