ಕರ್ನಾಟಕ

karnataka

ETV Bharat / entertainment

ರಾಜ್​ ಕುಂದ್ರಾ ಜೈಲು ಜೀವನದ ಅನುಭವ ತೆರೆಗೆ; ನಾಯಕನಾಗಿ ಅವರಲ್ಲ, ಮತ್ಯಾರು? - ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರು ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡುತ್ತಿದ್ದು, ನಾಯಕನಾಗಿ ಅವರು ನಟಿಸುತ್ತಿಲ್ಲ ಎಂದು ವರದಿಯಾಗಿದೆ.

Raj Kundra backs film on jail experience, no plans to star
ರಾಜ್​ ಕುಂದ್ರಾ ಜೈಲು ಜೀವನದ ಅನುಭವ ತೆರೆಗೆ; ನಾಯಕನಾಗಿ ಅವರಲ್ಲ..ಮತ್ಯಾರು?

By ETV Bharat Karnataka Team

Published : Oct 3, 2023, 10:36 PM IST

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಅವರು ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಮುಂಬೈನ ಆರ್ಥರ್​​ ರೋಡ್​ ಜೈಲಿನಲ್ಲಿ ರಾಜ್​ ಕುಂದ್ರಾ ಎದುರಿಸಿದ ಸಂಕಷ್ಟಗಳನ್ನು ಕಥಾವಸ್ತುವನ್ನಾಗಿರಿಸಿ ಸಿನಿಮಾ ತಯಾರಾಗಲಿದೆ. ಈ ಮೊದಲು ಚಿತ್ರದಲ್ಲಿ ಅವರೇ ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗಿನ ಮಾಹಿತಿ ಪ್ರಕಾರ, ಅವರು ನಾಯಕನ ಪಾತ್ರವನ್ನು ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

2021ರಲ್ಲಿ ರಾಜ್​ ಕುಂದ್ರಾ ಅವರ ಬಂಧನವಾಗಿತ್ತು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್​ ಕುಂದ್ರಾ ಜೈಲು ಪಾಲಾಗಿದ್ದರು. ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರನ್ನೂ ಸಹ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಅವರು ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡುತ್ತಿರುವ ಮಾಹಿತಿ ಹೊರಬಿದ್ದ ಬಳಿಕ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಿದ್ದಾರೆ.

ಚಿತ್ರದ ಸ್ಕ್ರಿಪ್ಟ್​ನಿಂದ ಹಿಡಿದು ನಿರ್ಮಾಣದವರೆಗೆ ಎಲ್ಲಾ ವಿಭಾಗಗಳಲ್ಲೂ ರಾಜ್​ ಕುಂದ್ರಾ ಮುತುವರ್ಜಿ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರೀಕರಣ ಮುಗಿಯುವವರೆಗೂ ನಿರ್ದೇಶಕರ ವಿವರಗಳನ್ನು ಗೌಪ್ಯವಾಗಿಡಲು ನಿರ್ಧರಿಸಲಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಅವರು ಈಗಾಗಲೇ ಪ್ರಮುಖ ಓಟಿಟಿ ಫ್ಲಾಟ್​ಫಾರ್ಮ್​ಗಳನ್ನು ಸಂಪರ್ಕಿಸಿದ್ದಾರೆ ಎಂದು ಬಾಲಿವುಡ್​ ವಿಶ್ಲೇಷಕರು ಹೇಳುತ್ತಿದ್ದಾರೆ. ರಾಜ್​ ಕುಂದ್ರಾ ತಮ್ಮ ಹಿಂದಿನ ವಿವಾದಗಳಿಂದ ಹೊರಬರಲು ಈ ಚಿತ್ರವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ನಟಿ ಶಿಲ್ಪಾ ಶೆಟ್ಟಿ ಹೃದಯ ಬಡಿತ ಹೆಚ್ಚಿಸಿದ ಟೊಮೆಟೊ ಬೆಲೆ!

ಆದರೆ, ಈ ಚಿತ್ರ ರಾಜ್​ ಕುಂದ್ರಾ ಅವರ ಜೀವನವನ್ನು ಆಧರಿಸಿದ್ದಾದರೂ, ಅವರು ನಾಯಕನಾಗಿ ನಟಿಸುತ್ತಿಲ್ಲ. ಪ್ರಮುಖ ಪಾತ್ರಕ್ಕೆ ಹಾಸ್ಯ ನಟ ಮುನಾವರ್​ ಫರುಕಿ ಅವರ ಹೆಸರು ಕೇಳಿಬಂದಿತ್ತು. ಆದರೆ ಅವರು ನಾಯಕನಾಗಿ ನಟಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂಬುದಷ್ಟೇ ಸದ್ಯದ ಮಾಹಿತಿ. ಚಿತ್ರತಂಡದ ಬಗ್ಗೆ ಯಾವುದೇ ವಿಚಾರ ತಿಳಿದುಬಂದಿಲ್ಲ.

ಶಿಲ್ಪಾ ಶೆಟ್ಟಿ ಮುಂದಿನ ಸಿನಿಮಾಗಳು: ಫಿಟ್ನೆಸ್​ ಐಕಾನ್​ ಶಿಲ್ಪಾ ಶೆಟ್ಟಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಪೊಲೀಸ್ ಪಡೆಯ ಕುರಿತ ವೆಬ್​ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಇದ್ದಾರೆ.

ಇದಲ್ಲದೇ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿನಯದ 'ಕೆಡಿ-ದಿ ಡೆವಿಲ್' ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಸತ್ಯವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೇಮ್​ ನಿರ್ದೇಶನದ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಅಲ್ಲದೇ, ಬಾಲಿವುಡ್​ ಖಳನಾಯಕ ಸಂಜಯ್​ ದತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಶಿರಡಿ ಸಾಯಿಬಾಬಾರ ದರ್ಶನ ಪಡೆದ ಶಿಲ್ಪಾ ಶೆಟ್ಟಿ ದಂಪತಿ: 'ಸುಖಿ' ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ

ABOUT THE AUTHOR

...view details