'ಒಂದು ಮೊಟ್ಟೆಯ ಕಥೆ'ಯಲ್ಲಿ ಮುಗ್ಧನಾಗಿ, 'ಗರುಡ ಗಮನ ವೃಷಭ ವಾಹನ'ದಲ್ಲಿ ರೌಡಿಯಾಗಿ ಕಾಣಿಸಿಕೊಂಡಿದ್ದ ನಟ ರಾಜ್ ಬಿ ಶೆಟ್ಟಿ 'ಟೋಬಿ'ಯಾಗಿ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದಾರೆ. ಶೆಟ್ರ ಜೊತೆ ಚೈತ್ರಾ ಜೆ ಆಚಾರ್ ಮತ್ತು ಸಂಯುಕ್ತಾ ಹೊರನಾಡು ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಆಗಸ್ಟ್ 25 ರಂದು ತೆರೆ ಕಂಡು, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಲ್ಟಿಫ್ಲೆಕ್ಸ್ಗಳಲ್ಲಿ ಟೋಬಿ ಸಿನಿಮಾದ ಕ್ರೇಜ್ ಕೊಂಚ ಜಾಸ್ತಿನೇ ಇದೆ. ಒಳ್ಳೆಯ ಕಂಟೆಂಟ್ ಜೊತೆಗೆ ಉತ್ತಮ ಸಿನಿಮಾವನ್ನು ಕೊಟ್ಟರೆ ಕನ್ನಡ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಅನ್ನೋದಕ್ಕೆ ಟೋಬಿ ಸಿನಿಮಾವೇ ಸಾಕ್ಷಿಯಾಗಿದೆ.
'ಟೋಬಿ' ಅನ್ನೋದು ಡಾರ್ಕ್ ಕಥೆ ಅಂದುಕೊಂಡಿದ್ದವರಿಗೆ ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಅನ್ನೋದು ಗೊತ್ತಾಗಿದೆ. ಅದೇ ರೀತಿ ಟೋಬಿ ಸಿನಿಮಾ ಮೂರು ದಿನಕ್ಕೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಗಾಂಧಿನಗರದ ಸಿನಿಮಾ ಪಂಡಿತರ ಪ್ರಕಾರ, ಟೋಬಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ರಾಜ್ಯಾದ್ಯಂತ 150 ರಿಂದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟೋಬಿ ಸಿನಿಮಾ ಬಿಡುಗಡೆ ಭರ್ಜರಿ ಪ್ರದರ್ಶನ ಕಾಣ್ತಿದೆ.
ಅದೇ ರೀತಿ ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಮಲ್ಟಿಪ್ಲೆಕ್ಸ್ಗಳಲ್ಲಿ ಟೋಬಿ ಚಿತ್ರಕ್ಕೆ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಈ ಕ್ರೇಜ್ ನೋಡಿದ್ರೆ ಟೋಬಿ ಸಿನಿಮಾ ಮೂರು ದಿನಕ್ಕೆ 10 ರಿಂದ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಗಾಂಧಿನಗರದ ಸಿನಿಮಾ ಪಂಡಿತರ ಮಾತಾಗಿದೆ. ರಾಜ್ ಬಿ ಶೆಟ್ಟಿ ಹಾಗೂ ಚೈತ್ರಾ ಜೆ ಆಚಾರ್ ಕೂಡ ಬೆಂಗಳೂರಿನ ಕೆಲ ಮಲ್ಟಿಫ್ಲೆಕ್ಸ್ ಹಾಗೂ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಶೆಟ್ರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.
ಇದನ್ನೂ ಓದಿ:ಕಥೆಯೇ ಹೀರೋ, ಫುಲ್ ಪೈಸಾ ವಸೂಲ್ ಎಂದ ರಾಜ್ ಶೆಟ್ಟಿ: 'ಟೋಬಿ'ಗೆ ಪ್ರೇಕ್ಷಕನ ಜೈಕಾರ!