ಹೈದರಾಬಾದ್: ಹಲವು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಬಹುತೇಕ ಸಿನಿ ಮತ್ತು ಕ್ರಿಕೆಟ್ ಪ್ರಿಯರ ಅಚ್ಚುಮೆಚ್ಚಿನ ಜೋಡಿ. ಕಳೆದ ಜನವರಿಯಲ್ಲಿ ನಟ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ನಲ್ಲಿ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದರು. ಸದ್ಯ ಐಪಿಎಲ್ನಲ್ಲಿ ಬ್ಯುಸಿಯಾಗಿರುವ ಕೆಎಲ್ ರಾಹುಲ್ 32ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಐಪಿಎಲ್ ಬಿಡುವಿನ ಮಧ್ಯೆ ಕುಟುಂಬದ ಜೊತೆಗೆ ಅವರು ಈ ಸಂಭ್ರಮಾಚಾರಣೆ ನಡೆಸಿದ್ದು, ಅಥಿಯಾ ಮತ್ತು ರಾಹುಲ್ ಒಟ್ಟಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ನಟ ಬಿಡುವು ಮಾಡಿಕೊಂಡು ಆಪ್ತರ ಸಮ್ಮುಖದಲ್ಲಿ ಮಾತ್ರ ಹುಟ್ಟುಹಬ್ಬ ಆಚರಿಸಿದ್ದು, ಇವರ ಸ್ನೇಹಿತರೊಬ್ಬರು ಈ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಆಥಿಯಾ ಮತ್ತು ರಾಹುಲ್ ದಂಪತಿ ಒಂದೇ ತರಹದ ಬಟ್ಟೆ ಧರಿಸಿ ಗಮನ ಸೆಳೆದಿದ್ದಾರೆ. ಮತ್ತೊಂದು ಫೋಟೋದಲ್ಲಿ ರಾಹುಲ್ ಕೇಕ್ ಕಟ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನು ಅಳಿಯ ರಾಹುಲ್ ಜನ್ಮ ದಿನದ ಹಿನ್ನೆಲೆ ನಟ ಸುನೀಲ್ ಶೆಟ್ಟಿ ಕೂಡ ವಿಶೇಷವಾಗಿ ಅವರಿಗೆ ಶುಭ ಕೋರಿದ್ದಾರೆ. ರಾಹುಲ್ ಅವರ ಅಪರೂಪದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ. ಅಥಿಯಾ ಶೆಟ್ಟಿ ಮದುವೆ ಸಂದರ್ಭದಲ್ಲಿನ ವಿಶೇಷ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಇದೇ ವೇಳೆ ಅಳಿಯ ರಾಹುಲ್ಗೆ ಪ್ರಶಂಸೆ ವ್ಯಕ್ತಪಡಿಸಿದರುವ ಸುನೀಲ್ ನಿಮ್ಮನ್ನು ಪಡೆದ ನಾವೇ ಧನ್ಯ ಎಂದಿದ್ದಾರೆ. ನಮ್ಮ ಜೀವನದಲ್ಲಿ ನೀವು ಒಂದು ಭಾಗವಾಗಿರುವುದಕ್ಕೆ ಸಂತಸ ವ್ಯಕ್ತವಾಗಿದೆ. ಹುಟ್ಟುಹಬ್ಬದ ಶುಭಾಶಯ ಬಾಬಾ ಎಂದಿದ್ದಾರೆ. ಇದೇ ವೇಳೆ ಅಥಿಯಾ ಸಹೋದರ ಅಹನ್ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯ ಅಣ್ಣ ಎಂದಿದ್ದಾರೆ.