ಇತ್ತೀಚೆಗೆ ಹಾಡೊಂದರ ಚಿತ್ರೀಕರಣದ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಪುತ್ರ ಎ.ಆರ್.ಅಮೀನ್ ಪಾರಾಗಿದ್ದಾರೆ. ಅಮೀನ್ ಅವರು ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಭಾರಿ ಗಾತ್ರದ ದೀಪ ಸ್ಟೇಜ್ ಮೇಲೆ ಬಿದ್ದಿದೆ. ಈ ಘಟನೆ ನಡೆದು ನಾಲ್ಕೈದು ದಿನ ಕಳೆದಿದ್ದು, ಇದೀಗ ಎ.ಆರ್ ಅಮೀನ್ ಸೋಶಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಅಮೀನ್ ತಮ್ಮ ತಂದೆ ರೆಹಮಾನ್ ಅವರಂತೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇದೇ ರೀತಿ ಹಾಡೊಂದರ ಚಿತ್ರೀಕರಣದಲ್ಲಿ ವೇದಿಕೆಯಲ್ಲಿ ಸಂಗೀತ ಪ್ರದರ್ಶನ ನೀಡುತ್ತಿದ್ದಾಗ ದೊಡ್ಡ ಗಾತ್ರದ ದೀಪ ದಿಢೀರ್ ವೇದಿಕೆ ಮೇಲೆ ಬಿದ್ದಿದೆ. ಕ್ರೇನ್ಗೆ ಕಟ್ಟಲಾಗಿದ್ದ ಕಬ್ಬಿಣದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದು ಪುಡಿಯಾಗಿವೆ. ಕೂದಲೆಳೆ ಅಂತರದಲ್ಲಿ ಅಮೀನ್ ಮತ್ತು ತಂಡ ಪಾರಾಗಿದೆ. ಯುವ ಗಾಯಕ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಶ್ರದ್ಧಾರೊಂದಿಗೆ ಸಿನಿಮಾ ಪ್ರಚಾರ ಮಾಡದ ರಣ್ಬೀರ್: ಪತ್ನಿ ಆಲಿಯಾ ಭಟ್ ಅಡ್ಡಿಯಾಗಿದ್ದಾರಾ?!
ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿರುವ ಅಮೀನ್, "ನಾನಿಂದು ಸುರಕ್ಷಿತವಾಗಿ ಮತ್ತು ಜೀವಂತವಾಗಿರುವುದಕ್ಕೆ ದೇವರು, ನನ್ನ ಪೋಷಕರು, ಕುಟುಂಬ, ಹಿತೈಷಿಗಳು ಮತ್ತು ನನ್ನ ಆಧ್ಯಾತ್ಮಿಕ ಗುರುಗಳಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಮುಂದುವರೆದು ಘಟನೆಯ ಬಗ್ಗೆ ವಿವರಿಸಿರುವ ಅವರು, "ಮೂರು ದಿನಗಳ ಹಿಂದೆ ಈ ಅಪಘಾತ ಸಂಭವಿಸಿದೆ. ನಾನು ಒಂದು ಹಾಡಿನ ಚಿತ್ರೀಕರಣಕ್ಕೆ ಹೋಗಿದ್ದೆ. ಕ್ಯಾಮರಾದ ಮುಂದಿರುವಾಗ ಎಲ್ಲಾ ಸುರಕ್ಷತಾ ಕ್ರಮಗಳ ಬಗ್ಗೆ ತಂಡವು ಕಾಳಜಿ ವಹಿಸಿದೆ ಎಂದು ನಂಬಿದ್ದೆ. ಆದರೆ ವೇದಿಕೆ ಏರಿ ಪರ್ಫಾಮೆನ್ಸ್ ಕಡೆ ಗಮನ ವಹಿಸಿದ್ದ ವೇಳೆ, ಕ್ರೇನ್ಗೆ ಕಟ್ಟಲಾಗಿದ್ದ ರಿಗ್, ಜೂಮರ್ ಇತ್ಯಾದಿಗಳು ಕೆಳಗೆ ಬಿದ್ದಿವೆ. ಒಂದು ಸೆಕೆಂಡ್ ತಡವಾಗಿದ್ದರೂ ಅದೆಲ್ಲವೂ ನನ್ನ ತಲೆಯ ಮೇಲೆ ಬೀಳುತ್ತಿತ್ತು. ಈ ಆಘಾತದಿಂದ ನನಗೆ ಮತ್ತು ನನ್ನ ತಂಡಕ್ಕೆ ಹೊರಬರಲು ಸಾಧ್ಯವಾಗುತ್ತಿಲ್ಲ" ಎಂದು ತಿಳಿಸಿದ್ದಾರೆ.
ಈ ಪೋಸ್ಟ್ಗೆ ಅನೇಕ ಸೆಲೆಬ್ರಿಟಿಗಳು ಸೇರಿದಂತೆ ನೆಟ್ಟಿಗರು ಕಮೆಂಟ್ ಮಾಡಿದ್ದು, "ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಹೆಚ್ಚು ಜಾಗರೂಕರಾಗಿರಿ" ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಯಾವುದೇ ಅಪಾಯವಿಲ್ಲದೇ ತಮ್ಮ ನೆಚ್ಚಿನ ಗಾಯಕನನ್ನು ಪಾರು ಮಾಡಿದ ದೇವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅಮೀನ್ ಅವರು "ಓಕೆ ಕಣ್ಮಣಿ" ಚಿತ್ರದ ಮೂಲಕ ಹಿನ್ನೆಲೆ ಗಾಯಕರಾಗಿ ಮೊದಲಿಗೆ ಗುರುತಿಸಿಕೊಂಡರು. ಅಂದಿನಿಂದ ಅವರು ವಿವಿಧ ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಇದನ್ನೂ ಓದಿ:ಆನಂದ ಸಾಗರದಲ್ಲಿ ನವ ದಂಪತಿ.. ಪತ್ನಿ ಕಿಯಾರಾ ಚೆಲುವಿಗೆ ಸಿದ್ಧಾರ್ಥ್ ಮೆಚ್ಚುಗೆಯ ಮಾತು