ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ, ಈಗ ಮತ್ತೊಂದು ಕಾದಂಬರಿ ಆಧಾರಿತ ಚಿತ್ರದೊಂದಿಗೆ ಸ್ಯಾಂಡಲ್ವುಡ್ ಕಡೆ ಮುಖ ಮಾಡಿದ್ದಾರೆ. ಸಾಹಿತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ 'ಶ್ಯಾನುಭೋಗರ ಮಗಳು' ಎಂಬ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರವು ಸ್ವತಂತ್ರ ಪೂರ್ವದ ಕಥೆಯನ್ನು ಒಳಗೊಂಡಿದ್ದು, ಇಡೀ ಸಿನಿಮಾ ಶ್ಯಾನುಭೋಗರ ಮಗಳ ಸುತ್ತಲೇ ಸುತ್ತುವುದು ವಿಶೇಷ. ಸ್ವತಂತ್ರ ಪೂರ್ವದ ಶ್ಯಾನಭೋಗರ ಮನೆತನಗಳನ್ನೂ ಈ ಸಿನಿಮಾ ಪ್ರತಿನಿಧಿಸಲಿದೆಯಂತೆ.
ಸಿನಿಮಾ ಮತ್ತು ಜಾಹೀರಾತಿನಲ್ಲಿ ಮಿಂಚುತ್ತಿರುವ 'ರಾಗಿಣಿ ಪ್ರಜ್ವಲ್' 'ಶ್ಯಾನುಭೋಗರ ಮಗಳು' ಚಿತ್ರದ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಮೇಘಶ್ರೀ, ನಿರಂಜನ್ ಕುಮಾರ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಶಂಕರ್ ಅಶ್ವತ್ಥ್ , ನೀನಾಸಂ ಅಶ್ವತ್ಥ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಪಾತ್ರವಾಗಿದ್ದು, ಆ ಪಾತ್ರಕ್ಕೆ ಆಯ್ಕೆ ಕಾರ್ಯ ನಡೆದಿದೆ.