ಗ್ಲ್ಯಾಮರ್ ಹಾಗು ಆ್ಯಕ್ಷನ್ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಎಂದು ಕರೆಯಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ಕೆಲ ವೈಯಕ್ತಿಕ ವಿಚಾರಗಳಿಂದ ಬಹಳ ನೊಂದಿದ್ದ ಅವರು ಸದ್ಯ ಕನ್ನಡ, ತಮಿಳು ಸಿನಿಮಾಗಳನ್ನು ಮಾಡ್ತಾ ಇದ್ದಾರೆ. ರಾಗಿಣಿ ಇದೀಗ ಬಿಂಗೊ ಎಂಬ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬಿಂಗೊ ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭ ಫಲಕ ತೋರಿದರು. ಸಚಿವ ವಿ ಸೋಮಣ್ಣ ಅವರು ಕ್ಯಾಮರಾ ಚಾಲನೆ ಮಾಡಿದರು. ಸಚಿವ ಮುನಿರತ್ನ ಸೇರಿದಂತೆ ಇತರೆ ಗಣ್ಯರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಮಾತನಾಡಿ, ಬಿಂಗೊ ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ ಶಂಭೋ ಶಿವ ಶಂಕರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಬಿಂಗೊ ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಚಿತ್ರದಲ್ಲಿ ಆರು ಮುಖ್ಯಪಾತ್ರಗಳಿರುತ್ತವೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಆರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್ ಮಜಾ ಟಾಕೀಸ್, ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು ಬಿಂಗೊ ಚಿತ್ರದಲ್ಲಿ ನಟಿಸಲಿದ್ದಾರೆ ಎಂದರು.