ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ದಿನವಾದರೂ, ಇಡೀ ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವ ಆಚರಿಸುವ ವಾಡಿಕೆ ಇದೆ. ಈವರೆಗೆ ಕನ್ನಡದ ರಾಜ್ಯೊತ್ಸವದ ಮೇಲೆ ಹಲವಾರು ಹಾಡುಗಳು ಬಂದಿವೆ. ಆದರೀಗ ತನ್ನ ಬೋಲ್ಡ್ ನಟನೆಯಿಂದ ಕನ್ನಡಿಗರ ಮನಗೆದ್ದಿರುವ ರಾಗಿಣಿ ದ್ವಿವೇದಿ ಅಭಿನಯದ ರಾಜ್ಯೋತ್ಸವ ದಿ ಆ್ಯಂಥಮ್ ಎಂಬ ವಿಡಿಯೋ ಸಾಂಗ್ ಐಪ್ಲೆಕ್ಸ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.
ಪುನೀತ್ ರಾಜ್‍ಕುಮಾರ್ ಅಭಿನಯದ ವಂಶಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ವಿಜಯ್ ಕೌಂಡಿನ್ಯ ಅವರ ಸಹೋದರ ವಿಕ್ರಮ್ ಶೀನಿವಾಸ್ ಈ ವಿಡಿಯೋ ಸಾಂಗ್ ನಿರ್ಮಾಣ ಮಾಡಿದ್ದಾರೆ. ವಿಕ್ರಮ್ ಅವರ ತಂದೆ ಶ್ರೀನಿವಾಸ್ ಅವರು ಕೂಡ ಡಾ. ರಾಜಕುಮಾರ್ ಅವರ ಜೊತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಈಗ ವಿಕ್ರಮ್ ಶ್ರೀನಿವಾಸ್ ಅವರು 12 ಎಂಟರ್ಟೈನ್ಮೆಂಟ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಆ ಸಂಸ್ಥೆ ಮೂಲಕ ಮೊದಲ ಪ್ರಯತ್ನವಾಗಿ "ರಾಜ್ಯೋತ್ಸವ" ಹಾಡನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಹಾಡನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ ಇಡೀ ಹಾಡನ್ನು ಮೆಚ್ಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, ಕನ್ನಡಿಗರಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಯಾಕೆಂದರೆ ನನ್ನನ್ನು ಎಲ್ಲರೂ ಗುರುತಿಸುತ್ತಿದ್ದಾರೆ ಎಂದರೆ ಅದು ಕನ್ನಡ ಚಿತ್ರಗಳಿಂದ. ನಾನು ಎಲ್ಲೇ ಹೋದರು ಕನ್ನಡತಿಯಾಗಿಯೇ ಗುರುತಿಸಿಕೊಳ್ಳುತ್ತೇನೆ. ವಿಕ್ರಮ್ ಶ್ರೀನಿವಾಸ್ ನಿರ್ಮಾಣ ಮಾಡಿರುವ ಈ ಹಾಡಿನಲ್ಲಿ ಅಭಿನಯಿಸಿದ್ದು ಖುಷಿಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಶ್ರೀಮುರಳಿ ಅವರಿಗೆ ಹಾಗೂ ಐಪ್ಲೆಕ್ಸ್ ಸಂಸ್ಥೆಗೆ ಧನ್ಯವಾದ ಎಂದರು.