ಗ್ಲ್ಯಾಮರ್ ಜೊತೆಗೆ ಆಕ್ಷನ್ ಹೀರೋಯಿನ್ ಆಗಿ ಕನ್ನಡಿಗರ ಮನಗೆದ್ದಿರುವ ನಟಿ ರಾಗಿಣಿ ದ್ವಿವೇದಿ. ಸದ್ಯ ಕನ್ನಡ, ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ತುಪ್ಪದ ಬೆಡಗಿ, ಇದೀಗ ಥ್ರಿಲ್ಲರ್ ಜಾನರ್ ಕಥೆಯೊಂದಿಗೆ ಸಿನಿ ಪ್ರೇಮಿಗಳ ಮುಂದೆ ಬರುತ್ತಿದ್ದಾರೆ. 'ಬಿಂಗೊ' ಅಂತಾ ಕ್ಯಾಚೀ ಟೈಟಲ್ ಹೊಂದಿರುವ ಸಿನಿಮಾದ ಚಿತ್ರೀಕರಣ ಸದ್ದಿಲ್ಲದೇ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ.
ಈ ಹಿಂದೆ ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಬಿಂಗೊ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯುವ ನಟ ಆರ್ ಕೆ ಚಂದನ್ ಹಾಗೂ ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಬೆಂಗಳೂರಿನಲ್ಲೇ ಭರದಿಂದ ಚಿತ್ರೀಕರಣ ಮಾಡಿ ಕುಂಬಳಕಾಯಿ ಒಡೆಯಲಾಗಿದೆ.
ಬಿಂಗೊ ಪದಕ್ಕೆ ಹಲವು ಅರ್ಥಗಳಿವೆ. ಸಿನಿಮಾದಲ್ಲಿ ಆರು ಮುಖ್ಯ ಪಾತ್ರಗಳಿರುತ್ತದೆ. ಅದರಲ್ಲಿ ನಿಂಬರ್ಗಿ ಎಂಬ ಮುಖ್ಯ ಪಾತ್ರದಲ್ಲಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿದ್ದು, ರಕ್ಷಾ ಕೂಡ ನಟಿಸುತ್ತಿದ್ದಾರೆ. ಜೊತೆಗೆ ರಾಜೇಶ್ ನಟರಂಗ, ಮಜಾ ಟಾಕೀಸ್ ಪವನ್ ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಚಿತ್ರದಲ್ಲಿದೆ.