ಪ್ರೇಕ್ಷಕರು ಒಳ್ಳೆ ಕಥೆಯ ಸಿನಿಮಾಗಳ ಕೈ ಹಿಡಿಯುತ್ತಾರೆ ಎಂಬ ಮಾತು ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಸದ್ಯ ಐಪಿಎಲ್ ಹವಾ ಹಾಗೂ ಚುನಾವಣೆಯ ಭರಾಟೆ ಜೋರಾಗಿದೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಮೊದಲಿನಂತೆ ಬರುತ್ತಿಲ್ಲ ಅನ್ನೋ ಮಾತು ಕೂಡ ಇದೆ. ಆದರೂ 'ರಾಘವೇಂದ್ರ ಸ್ಟೋರ್ಸ್' ಯಶಸ್ವಿ ಪ್ರದರ್ಶನ ಕಾಣ್ತಿದೆ. ಕೆಲ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ನಡೆಯುತ್ತಿದೆ. ಈ ಖುಷಿಯನ್ನು 'ರಾಘವೇಂದ್ರ ಸ್ಟೋರ್ಸ್' ಚಿತ್ರತಂಡ ಹಂಚಿಕೊಂಡಿದೆ.
ಹೌದು, 'ರಾಘವೇಂದ್ರ ಸ್ಟೋರ್ಸ್' ಸ್ಯಾಂಡಲ್ವುಡ್ನ ನವರಸ ನಾಯಕ ಜಗ್ಗೇಶ್ ಪಾಲಿಗೆ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ ನವರಸ ನಾಯಕ ಇಂಥಹದ್ದೊಂದು ಗೆಲುವನ್ನು ಕಂಡು ಬಹಳ ದಿನಗಳಾಗಿತ್ತು. ಇನ್ನು ಚಿತ್ರ ನೋಡಿದ ಪ್ರೇಕ್ಷಕರು ನಗುವ ಜೊತೆಗೆ ಕಣ್ಣೀರನ್ನೂ ಸುರಿಸಿದ್ದಾರೆ. ಜಗ್ಗೇಶ್ ಅವರನ್ನು ಅಪ್ಪಿ ಮೆಚ್ಚುಗೆಯ ಮಾತನ್ನೂ ಆಡ್ತಿದ್ದಾರೆ. ಹೀಗಾಗಿ ಜಗ್ಗೇಶ್ ಮೊಗದಲ್ಲಿ ಧನ್ಯತಾಭಾವ ಮೂಡಿದೆ.
ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಒಂದು ಹಾಡು ಹಾಗೂ ಎರಡು ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಹೀಗಾಗಿ, ಚಿತ್ರತಂಡದ ಈ ನಿರ್ಧಾರದ ಕುರಿತು ಅನೇಕರಲ್ಲಿ ಅನೇಕ ಪ್ರಶ್ನೆಗಳಿವೆ. ಇದಕ್ಕೂ ಉತ್ತರ ಕೊಟ್ಟ ಜಗ್ಗೇಶ್, ಕನ್ನಡ ಚಿತ್ರರಂಗಕ್ಕೆ ಕಿವಿಮಾತನ್ನು ಹೇಳಿದರು. ನಾಲ್ಕು ವರ್ಷ ಬೇಡ, ನಲವತ್ತು ದಿನದಲ್ಲಿ ಚಿತ್ರ ಪೂರೈಸಲು ಸಾಧ್ಯವಾದಷ್ಟು ಪ್ರಯತ್ನ ಪಡಿ ಎಂದರು.
ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ 'ರಾಘವೇಂದ್ರ ಸ್ಟೋರ್ಸ್' ಗೆಲುವು ಸದಾ ನೆನಪಿನಲ್ಲಿರಲಿದೆ. ಸಂತೋಷ್ ಆನಂದ್ ರಾಮ್ ಕಮರ್ಷಿಯಲ್ ನಿರ್ದೇಶಕ ಎನ್ನುವ ಅಭಿಪ್ರಾಯ ಬಹುತೇಕರಲ್ಲಿದೆ. ರಾಘವೇಂದ್ರ ಸ್ಟೋರ್ಸ್ ಸದ್ಯ ಈ ಅಭಿಪ್ರಾಯವನ್ನು ಬದಲಿಸಿದೆ. ಆದರೂ ಚಿತ್ರ ತೆರೆಗೆ ಬರುವ ಮುನ್ನ ಸಂತೋಷ್ ಆನಂದ್ ರಾಮ್ ಅವರಲ್ಲಿ ಭಯ ಇದ್ದಿದ್ದು ನಿಜ ಎಂದರು.