ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ನವೆಂಬರ್ 11ರಂದು ಅವರು ತಮ್ಮ ಹುಟ್ಟುಹಬ್ಬವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬರ್ತ್ಡೇ ಸೆಲೆಬ್ರೇಶನ್ನಿಂದ ರಾಧಿಕಾ ದೂರವಿದ್ದರು. ಆದರೆ, ಈ ವರ್ಷ ಅಭಿಮಾನಿಗಳಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಅವರೊಂದಿಗೆ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ರಾಧಿಕಾ ಅವರು ಮದುವೆಯಾಗಿ ಒಂದು ಮಗುವಾದ ನಂತರ ಕೆಲ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಮತ್ತೆ 'ದಮಯಂತಿ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ 'ಅಜಾಗ್ರತ'ದ ಮೂಲಕ ಸಪ್ತಭಾಷೆಗಳಲ್ಲಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ. ಇಷ್ಟು ವರುಷ ಹುಟ್ಟುಹಬ್ಬದಿಂದಲೂ ದೂರವಿದ್ದ ನಟಿ ಈ ಬಾರಿ ಗ್ರ್ಯಾಂಡ್ ಆಗಿ ಬರ್ತ್ಡೇ ಸೆಲೆಬ್ರೇಶನ್ ಮಾಡಿಕೊಳ್ಳಲು ಜೈ ಅಂದಿದ್ದಾರೆ.
ಅಭಿಮಾನಿಗಳ ಭೇಟಿ ಎಲ್ಲಿ?: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಫ್ಯಾನ್ಸ್ಗೆ ಆಹ್ವಾನ ನೀಡಿದ್ದಾರೆ. "ಎಲ್ಲರಿಗೂ ನಮಸ್ಕಾರ. ಎಷ್ಟೋ ವರ್ಷಗಳಿಂದ ನನ್ನ ಅಭಿಮಾನಿಗಳನ್ನು ಭೇಟಿ ಮಾಡಲು ಆಗಿರಲಿಲ್ಲ. ಹಾಗಾಗಿ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೇನೆ. ಇದೇ ನವೆಂಬರ್ 11 ರಂದು ಶನಿವಾರ ಸಂಜೆ 6.30 ರಿಂದ 9 ಗಂಟೆಯವರೆಗೆ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳಲಿದ್ದೇನೆ. ಹಾಗಾಗಿ ಶನಿವಾರ ಸಿಗೋಣ. ಲವ್ ಯೂ ಆಲ್" ಎಂದಿದ್ದಾರೆ.
ಇದನ್ನೂ ಓದಿ:ಪಂಚ ಭಾಷೆಯಲ್ಲಿ 'ದಮಯಂತಿ' ಅವತಾರದಲ್ಲಿ ರಾಧಿಕಾ... ಕನ್ನಡದಿಂದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ!
ವಿಡಿಯೋಗೆ ನೀಡಿರುವ ಕ್ಯಾಪ್ಶನ್ನಲ್ಲಿ ಭೇಟಿಯಾಗೋಕೆ ವಿಳಾಸವನ್ನು ಕೂಡ ತಿಳಿಸಿದ್ದಾರೆ. "580/2, ಎರಡನೇ ಮುಖ್ಯ ರಸ್ತೆ, ಮೂರನೇ ಬ್ಲಾಕ್, ಅಮರಜ್ಯೋತಿ ಲೇಔಟ್, ರಾಜ್ ಮಹಲ್ ವಿಲಾಸ್ 2nd ಸ್ಟೇಜ್, ಆರ್.ಎಂ.ವಿ 2nd ಸ್ಟೇಜ್, ಬೆಂಗಳೂರು" ಎಂದು ಮಾಹಿತಿ ನೀಡಿದ್ದಾರೆ. ಈ ಸ್ಥಳದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನವೆಂಬರ್ 11ರಂದು ಶನಿವಾರ ಸಂಜೆ 6.30 ರಿಂದ ರಾತ್ರಿ 9ರವರೆಗೆ ಅಭಿಮಾನಿಗಳ ಜೊತೆಯೇ ಇರಲಿದ್ದಾರೆ. ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲಿದ್ದಾರೆ.
ಸ್ಯಾಂಡಲ್ವುಡ್ ಸ್ವೀಟಿ ಬಗ್ಗೆ.. 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್ ನಟಿಯಾಗಿ ಮಿಂಚುತ್ತಿರುವವರು ರಾಧಿಕಾ ಕುಮಾರಸ್ವಾಮಿ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸೃಜನ್ ಲೋಕೇಶ್ ಜೊತೆ 'ನೀಲಮೇಘಶ್ಯಾಮ' ಚಿತ್ರದ ಮೂಲಕ ತಮ್ಮ ಕರಿಯರ್ ಆರಂಭಿಸಿದರು. ಈ ಸಿನಿಮಾ ಹೇಳುವಷ್ಟು ಹೆಸರು ಮಾಡದಿದ್ದರೂ, ಇದರ ನಂತರ ನಟ ವಿಜಯ್ ರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ' ಸಿನಿಮಾ ರಾಧಿಕಾರಿಗೆ ಒಳ್ಳೆ ಹೆಸರು ತಂದುಕೊಟ್ಟಿತು.
ನಂತರ ತವರಿಗೆ ಬಾ ತಂಗಿ, ಪ್ರೇಮಕೈದಿ, ಮಣಿ, ತಾಯಿ ಇಲ್ಲದ ತಬ್ಬಲಿ, ಮಸಾಲಾ, ಆಟೋ ಶಂಕರ್, ಮಂಡ್ಯ, ಅನಾಥರು, ಸ್ವೀಟಿ ನನ್ನ ಜೋಡಿ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾ ನಿರ್ಮಾಣದ ವಿಷಯಕ್ಕೆ ಬಂದರೆ, ಯಶ್ ಹಾಗೂ ರಮ್ಯ ಅಭಿನಯದ 'ಲಕ್ಕಿ' ಹಾಗೂ ಆದಿತ್ಯ ಜೊತೆ ತಾವು ನಟಿಸಿದ್ದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನು ರಾಧಿಕಾ ನಿರ್ಮಾಣ ಮಾಡಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರಗಳಲ್ಲಿ ಕೂಡಾ ರಾಧಿಕಾ ಹೆಸರು ಮಾಡಿದ್ದಾರೆ. ಇವರ ಮುಂಬರುವ ಚಿತ್ರ 'ಅಜಾಗ್ರತ'. ಸಪ್ತ ಭಾಷೆಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ.
ಇದನ್ನೂ ಓದಿ:ಹಾರರ್ ಕಥೆಗೆ ರವಿರಾಜ್ ನಿರ್ಮಾಪಕ.. ಸ್ಯಾಂಡಲ್ವುಡ್ಗೆ ರಾಧಿಕಾ ಕುಮಾರಸ್ವಾಮಿ ಸಹೋದರನ ಎಂಟ್ರಿ