ಕರ್ನಾಟಕ

karnataka

ETV Bharat / entertainment

ಪಿವಿಆರ್​ ಐನಾಕ್ಸ್​ಗೆ 300 ಕೋಟಿ ರೂ.ಗೂ ಅಧಿಕ ನಷ್ಟ: 50 ಸ್ಕ್ರೀನ್​​ ಮುಚ್ಚುವ ನಿರ್ಧಾರ

ಪಿವಿಆರ್​ ಐನಾಕ್ಸ್ ದೇಶದೆಲ್ಲಡೆ 50 ಸ್ಕ್ರೀನ್​​ ಮುಚ್ಚುವ ನಿರ್ಧಾರಕ್ಕೆ ಬಂದಿದೆ.

PVR Inox to shut down 50 screens
50 ಸ್ಕ್ರೀನ್​​ ಮುಚ್ಚಲಿರುವ ಪಿವಿಆರ್​ ಐನಾಕ್ಸ್

By

Published : May 16, 2023, 8:15 PM IST

ಒಂದು ಕಡೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಅನ್ನುವ ಮಾತಿದೆ. ಆದರೆ ಚಿತ್ರರಂಗದವರು ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಟಿಟಿಯಿಂದ ಎದುರಾಗ್ತಿರುವ ಸಮಸ್ಯೆಯ ಬಗ್ಗೆಯೂ ಆಲೋಚನೆ ಮಾಡ್ತಿಲ್ಲ. ಚಿತ್ರಮಂದಿರಗಳ ಸ್ಥಿತಿ ಗತಿಯ ಕುರಿತು ಚರ್ಚೆ ಮಾಡ್ತಿಲ್ಲ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಮರಳಿ ಕರೆತರುವ ಕುರಿತು ಚಿಂತನ ಮಂಥನ ನಡೆಯುತ್ತಿಲ್ಲ ಮಾಡ್ತಿಲ್ಲ ಎಂಬ ಮಾತುಗಳಿವೆ. ಇತ್ತ ಮಲ್ಟಿಪ್ಲೆಕ್ಸ್​ಗಳು ಭಾರಿ ನಷ್ಟ ಅನುಭವಿಸಿದೆ.

ಪ್ರೇಕ್ಷಕರ ಕೊರತೆ ಹಿನ್ನೆಲೆ ಕೇವಲ ಸಿಂಗಲ್ ಸ್ಕಿನ್ ಚಿತ್ರಮಂದಿರಗಳಷ್ಟೇ ಅಲ್ಲ ಮಲ್ಟಿಪ್ಲೆಕ್ಸ್ ಮಾಲೀಕರು ಕೂಡ ಹೈರಾಣಾಗಿದ್ದಾರೆ. ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ ದೇಶದಲ್ಲಿ ಮುನ್ನುಡಿ ಬರೆದ ಪಿ.ವಿ. ಆರ್ ದೇಶದೆಲ್ಲೆಡೆ 50 ಪರದೆಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಹೌದು, 2023ರ ಜನವರಿಯಿಂದ ಮಾರ್ಚ್​​ವರೆಗೆ ಮೂರೇ ಮೂರು ತಿಂಗಳಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 333 ಕೋಟಿ ರೂ. ನಷ್ಟವನ್ನು ಪಿವಿಆರ್ ಐನಾಕ್ಸ್ ಸಂಸ್ಥೆ ಅನುಭವಿಸಿದೆ ಎನ್ನುವ ಮಾಹಿತಿ ಇದೆ.

ಈ ಹಿಂದೆ ಪಿ.ವಿ.ಆರ್ ಹಾಗೂ ಐನಾಕ್ಸ್ ಎರಡೂ ಪ್ರತ್ಯೇಕ ಆಗಿದ್ದವು. ಕೆಲ ತಿಂಗಳ ಹಿಂದೆ ಐನಾಕ್ಸ್ ಪಿವಿಆರ್ ಜೊತೆ ವಿಲೀನವಾಯ್ತು. ಪಿವಿಆರ್ ಹೆಸರು ಆ ನಂತರ ಪಿವಿಆರ್ ಐನಾಕ್ಸ್ ಎಂದು ಬದಲಾಯ್ತು. ಹೀಗಾಗಿ ಎಲ್ಲರೂ ಲಾಭದ ನಿರೀಕ್ಷೆಯಲ್ಲಿದ್ದರು. ಎರಡೂ ಸಂಸ್ಥೆಗಳು ವಿಲೀನವಾದ ಹಿನ್ನೆಲೆ, ಹಣದ ಹೊಳೆಯೇ ಹರಿಯಲಿದೆ ಎಂದೇ ಹಲವರು ಭಾವಿಸಿದ್ದರು. ಆದ್ರೆ ಅಂದುಕೊಂಡಿದ್ದು ಒಂದು, ಆಗಿದ್ದು ಮತ್ತೊಂದು.

ಐನಾಕ್ಸ್ ಜೊತೆ ಒಪ್ಪಂದ ಮಾಡಿಕೊಳ್ಳುವ ಮುನ್ನ ಪಿ.ವಿ. ಆರ್ 2022ರ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ 16 ಕೋಟಿ ರೂ. ಲಾಭ ಮಾಡಿತ್ತು. 2022ರ ಮೊದಲ ತ್ರೆಮಾಸಿಕ ಅವಧಿಯಲ್ಲಿ ಅಂದರೆ ಜನವರಿಯಿಂದ ಮಾರ್ಚ್ ವರೆಗೆ 105 ಕೋಟಿ ರೂ. ನಷ್ಟ ಅನುಭವಿಸಿತ್ತು. ಆದರೆ, ವಿಲೀನದ ನಂತರ 105 ಕೋಟಿ ಇದ್ದ ನಷ್ಟದ ಲೆಕ್ಕ 333 ಕೋಟಿ ರೂ.ಗೆ ಏರಿದೆ. ಬಹುತೇಕ ಮೂರು ಪಟ್ಟು ನಷ್ಟ ಹೆಚ್ಚಾಗಿದೆ.

ಇನ್ನೂ ನಷ್ಟದ ಲೆಕ್ಕಾಚಾರದ ನಡುವೆಯೂ ಪಿ.ವಿ.ಆರ್ ದೇಶದೆಲ್ಲೆಡೆ ಸ್ಕ್ರೀನ್​ಗಳ ಸಂಖ್ಯೆ ಹೆಚ್ಚಿಸುವತ್ತ ಗಮನ ಹರಿಸಿದೆ. 140 ಸ್ಕ್ರೀನ್​ಗಳನ್ನು ಹೆಚ್ಚಿಸಲಾಗಿದೆ. ವರ್ಷದ ಅಂತ್ಯಕ್ಕೆ 180ಕ್ಕೆ ಏರಲಿದೆ. ಆದರೆ, ನಿರಂತರವಾದ ನಷ್ಟ ಇದೀಗ ಪಿ.ವಿ.ಆರ್ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಕಂಗಾಲಾದ ಪಿ.ವಿ.ಆರ್ ಐನಾಕ್ಸ್ ಒಂದು ಕಡೆ ಪರದೆಗಳ ಸಂಖ್ಯೆ ಹೆಚ್ಚಿಸುತ್ತಿದೆ. ಇನ್ನೊಂದು ಕಡೆ ನಷ್ಟಕ್ಕೆ ಕಡಿವಾಣ ಹಾಕಲು ನಿರ್ಧಾರ ಮಾಡಿದೆ. ದೇಶದೆಲ್ಲೆಡೆ ಪರಾಮರ್ಷೆ ಮಾಡಿ, ಅವಲೋಕಿಸಿ ನಷ್ಟಕ್ಕೆ ಕಾರಣವಾಗ್ತಿರುವ 50 ಸ್ಕ್ರೀನ್​​ಗಳನ್ನ ಮುಚ್ಚಲು ಪಿ.ವಿ. ಆರ್ ಮುಂದಾಗಿದೆ.

ಇನ್ನು ಪಿ.ವಿ.ಆರ್ ನಲ್ಲಿ ಪ್ರಾದೇಶಿಕ ಭಾಷೆಯ ಚಿತ್ರಕ್ಕಿಂತ, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಕ್ಕೆ ಮಣೆ ಹಾಕಲಾಗುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಇದೆ. ಪಿವಿಆರ್​​ಗೆ ಬಾಲಿವುಡ್ ಹಾಗೂ ಹಾಲಿವುಡ್​​ನ ಕೊಡುಗೆ ತುಂಬಾ ದೊಡ್ಡದಿತ್ತು.

ಆದ್ರೆ ಒಂದೂವರೆ ವರ್ಷದಿಂದ ಹಿಂದಿ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಕ್ತಿಲ್ಲ. ದಿನದಿಂದ ದಿನಕ್ಕೆ ಹಿಂದಿ ಚಿತ್ರ ನೋಡುವ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗ್ತಿದೆ. ಕೊರನಾಗೂ ಮುನ್ನದ ದಿನಗಳನ್ನು ಹೋಲಿಸಿಕೊಂಡರೆ, ಸದ್ಯ ಪಿವಿಆರ್​ನಲ್ಲಿ ಹಿಂದಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ.

ಇದನ್ನೂ ಓದಿ:ಉಪಾಸನಾ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ವ್ಯಕ್ತಿಯನ್ನು ಥಳಿಸಿದ ರಾಮ್​​ ಚರಣ್​ ಬೆಂಬಲಿಗರು

ಭಾರತದಲ್ಲಿ ಹಾಲಿವುಡ್ ಸಿನಿಮಾಗಳು ಮೊದಲಿನಂತೆ ತೆರೆ ಕಾಣುತ್ತಿಲ್ಲ. ಹಾಲಿವುಡ್​​ ಅಬ್ಬರ ಸದ್ಯ ಇಲ್ಲ. ಇವೆಲ್ಲವೂ ವ್ಯಾಪಾರ ವಹಿವಾಟು ಕುಸಿಯಲು ಪ್ರಮುಖ ಕಾರಣವೆನ್ನುವ ಮಾತನ್ನ ಖುದ್ದು ಪಿ.ವಿ. ಆರ್ ಐನಾಕ್ಸ್ ಸಂಸ್ಥೆ ಒಪ್ಪಿಕೊಂಡಿದೆ. ನಷ್ಟದ ಕುರಿತು ಮಾಹಿತಿಯನ್ನೂ ನೀಡಿದೆ.

ಇದನ್ನೂ ಓದಿ:'ವಿಕೆಂಡ್​ ವಿತ್​ ರಮೇಶ್​​' ಸೀಟ್​ನಲ್ಲಿ ಕುಳಿತು ಸಾಹಿತ್ಯ ರಚಿಸಿದ ವಿ. ನಾಗೇಂದ್ರ ಪ್ರಸಾದ್

ಒಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕಾದ 115 ನಗರಗಳಲ್ಲಿ 361 ಸಿನಿಮಾ ಮಂದಿರಗಳ ಮೂಲಕ 1,670 ಸಿನಿಮಾ ಸ್ಕ್ರೀನ್​​ಗಳನ್ನ ಹೊಂದಿರುವ ಪಿ.ವಿ.ಆರ್ ಐನಾಕ್ಸ್ ಸಂಸ್ಥೆ ಸದ್ಯಕ್ಕೆ 50 ಸ್ಕ್ರೀನ್​​ಗಳನ್ನ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಮುಂದಿನ ದಿನದಲ್ಲಿ ನಷ್ಟ ಕಡಿಮೆಯಾಗದೇ ಇದ್ದರೆ, ಇನ್ನೂ ಕಠಿಣವಾದ ನಿರ್ಧಾರ ಕೈಗೊಳ್ಳುವ ಮಾತನ್ನೂ ಆಡಿದೆ. ಒಟಿಟಿ ಚಿತ್ರರಂಗ ಹಾಗೂ ಚಿತ್ರಮಂದಿರಕ್ಕೆ ನೇರವಾದ ಸ್ಪರ್ಧೆಯನ್ನ ನೀಡ್ತಿದೆ. ಚಿತ್ರಮಂದಿರದ ಸಂಪ್ರದಾಯ ನಶಿಸಿ ಹೋಗುವ ಭೀತಿ ಕಾಡುತ್ತಿರೋದಂತೂ ಸತ್ಯ.

ABOUT THE AUTHOR

...view details