69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳವಾರ (ಅಕ್ಟೋಬರ್ 17) ಅದ್ಧೂರಿಯಾಗಿ ನಡೆಯಿತು. ಸಿನಿಮಾ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಹಲವು ವಿಭಾಗಗಳಲ್ಲಿ ಗಣ್ಯರು ಕೇಂದ್ರದಿಂದ ಕೊಡಮಾಡುವ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.
ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಬ್ಲಾಕ್‌ಬಸ್ಟರ್ ಚಿತ್ರ 'ಪುಷ್ಪ: ದಿ ರೈಸ್'ಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಹೈದರಾಬಾದ್‌ಗೆ ಮರಳಿದ ಅಲ್ಲು ಅರ್ಜುನ್ ಅವರಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಇತ್ತೀಚೆಗೆ, ರಾಷ್ಟ್ರಪ್ರಶಸ್ತಿ ಸಿಕ್ಕ ಖುಷಿಗೆ 'ಪುಷ್ಪ' ನಿರ್ಮಾಪಕರು ಸಂತೋಷಕೂಟ ಕೂಡ ಆಯೋಜಿಸಿದ್ದರು.
'ಪುಷ್ಪ: ದಿ ರೈಸ್' ಚಿತ್ರ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಅಕ್ಟೋಬರ್ 21 ರಂದು ಮೈತ್ರಿ ಮೂವಿ ಮೇಕರ್ಸ್ (ಪುಷ್ಪ ನಿರ್ಮಾಪಕರು) ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಪಾರ್ಟಿ ಆಯೋಜಿಸಿತ್ತು. ಅತ್ಯುತ್ತಮ ನಟ ಅಲ್ಲು ಅರ್ಜುನ್ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಕಾರ್ಯಕ್ರಮದ ಕೇಂದ್ರಬಿಂದುವಾಗಿ ಗುರುತಿಸಿಕೊಂಡರು. ಮೈತ್ರಿ ಮೂವಿ ಮೇಕರ್ಸ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಈವೆಂಟ್ನ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದೆ.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣರ 'ಪುಷ್ಪ: ದಿ ರೈಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. 2021ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ಈ ಚಿತ್ರ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರನ್ನು ರಂಜಿಸುವಲ್ಲಿ ಯಶಸ್ಸು ಸಾಧಿಸಿದೆ. 'ಪುಷ್ಪ: ದಿ ರೈಸ್' ಆಂಧ್ರಪ್ರದೇಶದ ಶೇಷಾಚಲಂ ಪ್ರದೇಶದಲ್ಲಿನ ರಕ್ತ ಚಂದನ ಕಳ್ಳಸಾಗಣೆ ಕುರಿತ ಕಥೆ ಆಧರಿಸಿದೆ.
ಇದನ್ನೂ ಓದಿ:ವಿಜಯ್ ಅಭಿನಯದ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ; ಕಲೆಕ್ಷನ್ ಡೀಟೆಲ್ಸ್ ಇಲ್ಲಿದೆ!
'ಪುಷ್ಪ' ಮೂಲಕ ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಮತ್ತು ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್ ಮೂವರೂ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಿದರು. ಇದಕ್ಕೂ ಮುನ್ನ 'ಆರ್ಯ' ಮತ್ತು 'ಆರ್ಯ 2'ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲು ಅರ್ಜುನ್ ಮತ್ತು ದೇವಿ ಶ್ರೀ ಪ್ರಸಾದ್ ತಮ್ಮ ವೃತ್ತಿಜೀವನವನ್ನು ನಿರ್ದೇಶಕ ಸುಕುಮಾರ್ ಅವರೊಂದಿಗೆ ಪ್ರಾರಂಭಿಸಿದ್ದು, ಇಂದಿಗೂ ಮೂವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸುಕುಮಾರ್ ನಿರ್ದೇಶನದ 'ಪುಷ್ಪ: ದಿ ರೂಲ್' ಚಿತ್ರದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಪ್ರಮುಖ ಪಾತ್ರಗಳನ್ನು ಮುಂದುವರಿಸಲಿದ್ದಾರೆ. 2024ರ ಆಗಸ್ಟ್ 15ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಮಹಿಳಾ ಪ್ರಧಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: 'ದಿ ಗರ್ಲ್ಫ್ರೆಂಡ್' ಫಸ್ಟ್ ಲುಕ್ ರಿಲೀಸ್