ಭಾರತೀಯ ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಚಿತ್ರನಗರಿ ''ರಾಮೋಜಿ ಫಿಲ್ಮ್ ಸಿಟಿ''ಯಲ್ಲಿ ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣ ಚುರುಕುಗೊಂಡಿದೆ. ಬಹುನಿರೀಕ್ಷಿತ ಸಿನಿಮಾಗಳ ಶೂಟಿಂಗ್ ಜೊತೆ ಜೊತೆಗೆ ಪ್ರವಾಸಿಗರ ಆಗಮನದಿಂದ ರಾಮೋಜಿ ಫಿಲ್ಮ್ ಸಿಟಿ ಜಗಮಗಿಸುತ್ತಿದೆ.
ಒಂದೆಡೆ ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರದ ಶೂಟಿಂಗ್ ದೃಶ್ಯಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮತ್ತೊಂದೆಡೆ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ತಂಡ ಕೂಡ ಶೂಟಿಂಗ್ನಲ್ಲಿ ಬ್ಯುಸಿಯಾಗಿದೆ. ಇವೆರಡೂ ಕೂಡ ಭಾರತೀಯ ಚಿತ್ರರಂಗದ ಮುಂದಿನ ಬಹುನಿರೀಕ್ಷಿತ, ಬಿಗ್ ಬಜೆಟ್ ಸಿನಿಮಾಗಳು.
'ಪುಷ್ಪ 2: ದಿ ರೂಲ್' ಸಿನಿಮಾದಲ್ಲಿ ಜಾತ್ರೆಯ ಹಿನ್ನೆಲೆಯಲ್ಲಿ ಮೂಡಿಬರುವ ಹಾಡಿನ ಚಿತ್ರೀಕರಣದಲ್ಲಿ ತಂಡ ಬ್ಯುಸಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಾಡಿನಲ್ಲಿ ಸುಮಾರು ಸಾವಿರ ನೃತ್ಯಗಾರರು ಇದ್ದಾರೆ ಎಂದು ತಿಳಿದು ಬಂದಿದೆ. 'ಪುಷ್ಪ 2' ಹಾಡಿಗೆ ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ತಿಂಗಳ ಶೆಡ್ಯೂಲ್ ಹಾಕಿಕೊಳ್ಳಲಾಗಿದ್ದು, ಹಾಡಿನ ಜೊತೆ ಜೊತೆಗೆ ಫೈಟ್ ಮತ್ತು ಕೆಲ ಪ್ರಮುಖ ದೃಶ್ಯಗಳನ್ನು ಸಹ ಚಿತ್ರೀಕರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೂ ಪುಷ್ಪ 2 ಶೂಟಿಂಗ್ ಅನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ನಡೆಸಲಾಗಿದೆ.