'ಪುಷ್ಪ 2: ದಿ ರೂಲ್' ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್ನ ಮುಂದುವರೆದ ಭಾಗ ಇದಾಗಿದೆ. ಈ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್ ನಟ ಫಹಾದ್ ಫಾಸಿಲ್ ಅವರ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ.
ಇಂದು ಫಹಾದ್ ಫಾಸಿಲ್ ಅವರ ಜನ್ಮದಿನ. ಆಗಸ್ಟ್ 8 ರಂದು ನಟ 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಪುಷ್ಪ 2: ದಿ ರೂಲ್ ಚಿತ್ರದ ಖಳನಾಯಕನ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಖಾಕಿ ಜಾಕೆಟ್ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ ಸಿಗರೇಟ್ ಸೇದುತ್ತಿರುವ ನೋಟದಲ್ಲಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲದೇ ವಿಲನ್ ಪಾತ್ರಕ್ಕೆ ಬೇಕಾದಂತೆ ಅವರನ್ನು ತೋರಿಸಲಾಗಿದೆ. ಫಹಾದ್ ಫಾಸಿಲ್ ವಿಲನ್ ಲುಕ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಪುಷ್ಪ 2: ದಿ ರೂಲ್ ಸಿನಿಮಾವನ್ನು ಸುಕುಮಾರನ್ ಬರೆದು ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. 2023ರ ಡಿಸೆಂಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಸುನೀಲ್, ಅಜಯ್, ರಾವ್ ರಮೇಶ್, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್ ಮತ್ತು ರೂಬೆನ್ ಸಂಕಲನವಿದೆ.