ಬಹುನಿರೀಕ್ಷಿತ ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಹಾಗೂ ಸುಕುಮಾರನ್ ನಿರ್ದೇಶನದ ಪುಷ್ಪ 2: ದಿ ರೂಲ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಚಿತ್ರತಂಡ ಚಿತ್ರದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಲಯಾಳಂ ನಟ ಫಹಾದ್ ಫಾಸಿಲ್ ಅವರನ್ನು ಒಳಗೊಂಡ ಪ್ರಮುಖ ಭಾಗಗಳ ಶೂಟಿಂಗ್ ಪೂರ್ಣಗೊಳಿಸಿರುವುದಾಗಿ ಅಪ್ಡೇಟ್ ನೀಡಿದೆ.
BTS(Behind the Screen) ತೆರೆಯ ಹಿಂದಿನ ಫೋಟೋವೊಂದನ್ನು ಸಿನಿಮಾ ತಯಾರಕರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, "#Pushpa2TheRule ನ ಪ್ರಮುಖ ವೇಳಾಪಟ್ಟಿ 'ಭನ್ವರ್ ಸಿಂಗ್ ಶೇಖಾವತ್' ಅಲಿಯಾಸ್ #FahadhFaasil ಅವರೊಂದಿಗೆ ಪೂರ್ಣಗೊಂಡಿದೆ. ಈ ಬಾರಿ ಅವರು ಪ್ರತೀಕಾರದೊಂದಿಗೆ ಹಿಂತಿರುಗುತ್ತಾರೆ" ಎಂದು ಬರೆದುಕೊಂಡಿದೆ.
2021 ರಲ್ಲಿ ಬಿಡುಗಡೆಯಾಗಿದ್ದ ಪುಷ್ಪ: ದಿ ರೈಸ್ ಸಿನಿಮಾದ ಸೀಕ್ವೆಲ್ ಪುಷ್ಪ 2 ಮೊದಲ ಭಾಗಕ್ಕಿಂತಲೂ ಉತ್ತಮವಾಗಿದೆ ಎಂದು ಸಿನಿಮಾಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಎರಡನೇ ಭಾಗದಲ್ಲಿ ಮೊದಲನೇ ಭಾಗದ ಕೊನೇಯಲ್ಲಿ ಪ್ರಾರಂಭವಾಗಿದ್ದ ಫಹಾದ್ ಫಾಸಿಲ್ ಅವರ ಭನ್ವರ್ ಸಿಂಗ್ ಹಾಗೂ ಅಲ್ಲು ಅರ್ಜುನ್ ಅವರ ಪುಷ್ಪಾ ಪಾತ್ರಗಳ ನಡುವಿನ ಮಹಾಕಾವ್ಯವನ್ನೇ ಪ್ರದರ್ಶಿಸಲಿದೆ ಎಂದು ಊಹಿಸಲಾಗಿದೆ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಭನ್ವರ್ ಸಿಂಗ್ ಪುಷ್ಪಾ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಅದರ ಮುಂದುವರಿದ ಅಧ್ಯಾಯ ಎರಡನೇ ಭಾಗದಲ್ಲಿ ಅದ್ಧೂರಿಯಾಗಿ ಮೂಡಿ ಬರಲಿದೆ.
ಅಲ್ಲು ಅರ್ಜುನ್ ಅವರ ಜನ್ಮದಿನದಂದು ಏಪ್ರಿಲ್ ತಿಂಗಳಲ್ಲಿ ಚಿತ್ರದ ನಿರ್ಮಾಪಕರು ಸೀಕ್ವೆಲ್ ನಲ್ಲಿ ಅಲ್ಲು ಅರ್ಜುನ್ ಅವರ ಫಸ್ಟ್ ಲುಕ್ ಹಾಗೂ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವಿಡಿಯೋ ದಾಖಲೆಯ ವೀಕ್ಷಣೆಯನ್ನೂ ಕಂಡಿತ್ತು. ಅಲ್ಲು ಅರ್ಜುನ್ ಅವರು ಹಂಚಿಕೊಂಡಿದ್ದ ಫಸ್ಟ್ ಲುಕ್ ಫೋಟೋದಲ್ಲಿ ಪುಷ್ಪಾ ಹೀರೋ ಸೀರೆ ಉಟ್ಟು, ಬಳೆ ತೊಟ್ಟು, ನಿಂಬೆಹಣ್ಣಿನ ಹಾರವನ್ನೂ ಹಾಕಿಕೊಂಡು ಹೆಣ್ಣಿನಂತೆ ಶೃಂಗಾರ ಮಾಡಿಕೊಂಡಿದ್ದ ಹಿಂದೆಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಪುಷ್ಪಾ ಸಿಗ್ನೇಚರ್ ಪೋಸ್ ಒಂದು ಭುಜವನ್ನು ಎತ್ತಿ ನಿಂತಿದ್ದ ಚಿತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು.
ಪುಷ್ಪಾ ಸಿನಿಮಾಕ್ಕೆ ಬಂಡವಾಳ ಹೂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ನೀಡಿರುವ ಮಾಹಿತಿ ಪ್ರಕಾರ, ಪುಷ್ಪ 2: ದಿ ರೂಲ್ ಸಿನಿಮಾ ಮೊದಲ ಭಾಗಕ್ಕಿಂತ ದೊಡ್ಡ ಬಜೆಟ್, ದೊಡ್ಡ ಆ್ಯಕ್ಷನ್ ಸೆಟ್ ತುಣುಕುಗಳು, ದೊಡ್ಡ ತಾರಾಗಣದೊಂದಿಗೆ ದೊಡ್ಡ ಪ್ರಮಾಣದಲ್ಲಿ ಬರಲಿದೆ. ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ನಿಹಾರಿಕಾ ಕೊನಿಡೆಲಾ ಹಾಗೂ ವಿಜಯ್ ಸೇತುಪತಿ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ರೂಮರ್ಗಳಿವೆ.
ಅಂತರರಾಷ್ಟ್ರೀಯ ಖ್ಯಾತಿಯ ಮಿರೋಸ್ಲಾ ಕುಬಾ ಬ್ರೋಜೆಕ್ ಛಾಯಾಗ್ರಹಣ, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲವಾದರೂ, ಪುಷ್ಪ 2: ದಿ ರೂಲ್ 2024ರ ಜನವರಿಯಲ್ಲಿ ಥಿಯೇಟರ್‌ಗಳಲ್ಲಿ ವಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:'ಪುಷ್ಪಾ ಸಿನಿಮಾದ ಶ್ರೀವಲ್ಲಿ ಪಾತ್ರಕ್ಕೆ ರಶ್ಮಿಕಾಗಿಂತ ನಾನೇ ಹೆಚ್ಚು ಸೂಕ್ತ': ಐಶ್ವರ್ಯಾ ರಾಜೇಶ್