ದಿವಗಂತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಅಮೃತ ಘಳಿಗೆ ಬಂದೇ ಬಿಟ್ಟಿದೆ. ಕನ್ನಡ ಚಿತ್ರರಂಗದ ರಾಜರತ್ನ, ಪವರ್ ಸ್ಟಾರ್ ಕಂಡ ಕನಸಿನ ಪಯಣದ ಚಿತ್ರ ಗಂಧದ ಗುಡಿ. ಟೀಸರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದೆ. ತೆರೆ ಮೇಲೆ ಚಿತ್ರವನ್ನು ನೋಡಲು ಕಾತುರರಾಗಿರುವ ಕೋಟ್ಯಂತರ ಅಭಿಮಾನಿಗಳಿಗೆ ಗಂಧದ ಗುಡಿಯ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ಈ ವರ್ಷದ ನಾಡಹಬ್ಬ ರಾಜ್ಯೋತ್ಸವವನ್ನು ಅಪ್ಪುವಿನ ಗಂಧದ ಗುಡಿಯೊಂದಿಗೆ ಆಚರಿಸಲು ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 28, 2022 ರಂದು ಗಂಧದಗುಡಿ ಬಿಡುಗಡೆಯಾಗುತ್ತಿದೆ. ಅಪ್ಪು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಷ್ಟ್ರ ಪ್ರಶಸ್ತಿ ಪಡೆದ ವನ್ಯಜೀವಿ ಚಿತ್ರ ನಿರ್ದೇಶಕ ಅಮೋಘವರ್ಷ ನಿರ್ದೇಶನದ ಚಲನಚಿತ್ರ ಇದಾಗಿದೆ.
ಈ ಸಿನಿಮಾ ಪ್ರಕೃತಿಯತ್ತ ಒಂದು ಪಯಣ. ಒಬ್ಬ ನಿಜವಾದ ನಾಯಕನ ಮತ್ತು ಅವನ ಕಾಳಜಿಯ ಕಥೆ. ಬಯಲು ಸೀಮೆಯಿಂದ ಹಿಡಿದು ಸಮುದ್ರ ತೀರದವರೆಗೂ, ಪತನವಾಗಿರುವ ಕಾಡುಗಳಿಂದ, ಪಶ್ಚಿಮ ಘಟ್ಟ, ದಟ್ಟ ಅರಣ್ಯದವರೆಗೂ ಈ ಮಣ್ಣಿನ ಸಿರಿ ಸೆರೆ ಹಿಡಿದಿರುವ ಸಿನಿಮಾ. ಹಾಡುಗಳೊಂದಿಗೆ, ದೃಶ್ಯ ವೈಭವದೊಂದಿಗೆ ತನ್ನ ಜನರಿಗೆ ಪರಿಚಯಿಸುವ ಉತ್ಸಾಹವನ್ನ ಪುನೀತ್ ರಾಜ್ ಕುಮಾರ್ ಮಾಡಿದ್ದಾರೆ.