ದಿವಂಗತ ನಟ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 42ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಿರ್ಮಾಪಕಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಪತಿ ಇಲ್ಲದ ನೋವಿನಲ್ಲಿಯೇ ಅಶ್ವಿನಿ ಪುನೀತ್ ರಾಜ್ಕುಮಾರ್ ದಿನ ಕಳೆಯುತ್ತಿದ್ದು, ಅಭಿಮಾನಿಗಳು ಅವರಿಗೆ ಶಕ್ತಿ ತುಂಬಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಜನ್ಮದಿನ:ಸ್ಯಾಂಡಲ್ವುಡ್ ಸದ್ಯ ಯಶಸ್ಸಿನ ಹುಮ್ಮಸ್ಸಿನಲ್ಲಿ ಮುಂದೆ ಸಾಗುತ್ತಿದೆ. ಒಂದೊಳ್ಳೆ ಕಂಟೆಂಟ್, ಅದ್ಧೂರಿ ಮೇಕಿಂಗ್ನಲ್ಲಿ ಸಿನಿಮಾಗಳು ಮೂಡಿಬರುತ್ತಿವೆ. ಯುವ ಕಲಾವಿದರ ಸಿನಿಮಾಗಳಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಬೆಂಬಲ ನೀಡುತ್ತಿದ್ದಾರೆ. ಹೆಚ್ಚಿನ ಸಿನಿಮಾ ಸಮಾರಂಭಗಳಿಗೆ ಭಾಗಿಯಾಗುವ ಮೂಲಕ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಜೊತೆಗೆ ಪತಿ ಪುನೀತ್ ರಾಜ್ಕುಮಾರ್ ಮಾಡುತ್ತಿದ್ದ ಸಿನಿಮಾ ಕೆಲಸ, ಸಮಾಜ ಸೇವೆಗಳನ್ನೂ ಮುಂದುವರಿಸಿಕೊಂಡು ಹೋಗುತ್ತಾ ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ.
ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ನಟನಿಗೆ ತೋರಿದ ಗೌರವ, ಪ್ರೀತಿ, ವಿಶ್ವಾಸವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಮೇಲೂ ವ್ಯಕ್ತಪಡಿಸುತ್ತಿದ್ದಾರೆ. ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಶುಭ ಕೋರುತ್ತಿದ್ದಾರೆ.
ಒಟಿಟಿಗೆ ಗಂಧದಗುಡಿ ಎಂಟ್ರಿ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕನಸಿನ ಚಿತ್ರ ಗಂಧದ ಗುಡಿ ಕಳೆದ ಸಾಲಿನಲ್ಲಿ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಚಿತ್ರ ಒಟಿಟಿಗೆ ಬರಲು ಸಜ್ಜಾಗಿದೆ. ಇದೇ 17ರಂದು ಅಂದ್ರೆ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗಂಧದ ಗುಡಿ ಪ್ರಸಾರವಾಗಲಿದೆ.
ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಮೂಡಿ ಬಂದ ಈ ಗಂಧದಗುಡಿ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ನಮ್ಮ ಕರುನಾಡಿನ ಅರಣ್ಯ ಸಂಪತ್ತು, ಪರಿಸರ ಹಾಗೂ ಪ್ರಾಣಿ ಸಂಕುಲದ ಬಗ್ಗೆ ಮಾಹಿತಿ ಒಳಗೊಂಡಿತ್ತು. ಪುನೀತ್ ರಾಜ್‍ಕುಮಾರ್ ಅಭಿನಯಿಸಿದ್ದ ಅವರ ಡ್ರೀಮ್ ಪಾಜೆಕ್ಟ್ ಗಂಧದ ಗುಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಪುನೀತ್ ರಾಜ್ಕುಮಾರ್ ನಮ್ಮೊಂದಿಗಿದ್ದಿದ್ದರೆ, 48ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ''ಗಂಧದಗುಡಿ: ಜರ್ನಿ ಆಫ್ ಎ ಟ್ರೂ ಹೀರೋ''ಒಂದು ಉತ್ತಮ ಉಡುಗೊರೆಯಾಗಿದ್ದು, ಪುನೀತ್ ರಾಜ್‌ಕುಮಾರ್ ಅವರ ಸಾಹಸ ಮತ್ತು ನಿಸರ್ಗ ಹಾಗೂ ನಮ್ಮ ನೆಲದ ಬಗ್ಗೆ ಅವರಿಗೆ ಇರುವ ಪ್ರೀತಿಯನ್ನು ಇದರಲ್ಲಿ ನೋಡಬಹುದಾಗಿದೆ. ಸಾಕ್ಷ್ಯಚಿತ್ರದಲ್ಲಿ ಪವರ್ ಸ್ಟಾರ್ ಹಾಗೂ ಅಮೋಘವರ್ಷ ಕರ್ನಾಟಕದ ಶ್ರೀಮಂತ ವನ್ಯ ಸಂಪತ್ತು, ಸುಂದರ ತಾಣಗಳು, ಜಲಪಾತಗಳು ಮತ್ತು ದಂತಕಥೆಗಳನ್ನು ಅನಾವರಣಗೊಳಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ, ನೀರಿನ ಸಂರಕ್ಷಣೆ ಮತ್ತು ಅರಣ್ಯ ನಾಶಕ್ಕೆ ಸಂಬಂಧಿಸಿದ ಪರಿಸರ ಕಳವಳಗಳನ್ನೂ ಇಬ್ಬರೂ ಚರ್ಚಿಸಿದ್ದಾರೆ. ಈ ಚಿತ್ರದಲ್ಲಿ ತಂದೆ ಡಾ. ರಾಜ್‌ಕುಮಾರ್ ಜೊತೆಗೆ ಪುನೀತ್ ಅವರಿಗೆ ಇದ್ದ ಬಂಧವೂ ಅನಾವರಣಗೊಂಡಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಪ್ರಾಯ:ಪ್ರೈಮ್ ವಿಡಿಯೋದಲ್ಲಿ ಗಂಧದಗುಡಿ ಸ್ಟ್ರೀಮಿಂಗ್ ಬಗ್ಗೆ ಮಾತನಾಡಿರೋ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈ ಸಿನಿಮಾ ಅಪ್ಪು ಕನಸಿನ ಯೋಜನೆ. ಪರಿಸರ ಸಂರಕ್ಷಣೆಯ ಬಗ್ಗೆ ಏನಾದರೂ ಮಾಡಬೇಕು ಎಂಬ ಆಸೆ ಅವರಲ್ಲಿತ್ತು. ಅಪ್ಪು ಅಭಿಮಾನಿಗಳು ಮತ್ತು ಕರ್ನಾಟಕದ ಪ್ರೇಕ್ಷಕರು ಈ ಸಿನಿಮಾವನ್ನು ಬಹಳ ಮೆಚ್ಚಿದ್ದಾರೆ. ಈ ಸುಂದರ ಪಯಣವನ್ನು ಇಡೀ ವಿಶ್ವವೇ ನೋಡಬೇಕು ಎಂದು ನಾವು ಬಯಸುತ್ತೇವೆ. ಈ ಸಿನಿಮಾ ಪಯಣದಲ್ಲಿ ನಮಗೆ ನೆರವು ನೀಡಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಈ ಹಿಂದೆ ಹಲವು ಬಾರಿ ನಾವು ಪ್ರೈಮ್ ವಿಡಿಯೋ ಜೊತೆಗೆ ಸಹಭಾಗಿತ್ವ ಸಾಧಿಸಿದ್ದೇವೆ ಮತ್ತು ನಮ್ಮ ದೀರ್ಘಕಾಲೀನ ಸಹಭಾಗಿತ್ವದ ಮೂಲಕ ಅಪ್ಪು ಸಿನಿಮಾವನ್ನು ಅವರ ಜನ್ಮದಿನೋತ್ಸವದಂದೇ ಇಡೀ ದೇಶಕ್ಕೆ ತಲುಪಿಸಲಿದ್ದೇವೆ ಎಂದು ತಿಳಿಸಿದ್ದಾರೆ.