ಕರ್ನಾಟಕ

karnataka

By

Published : Oct 28, 2022, 8:51 PM IST

ETV Bharat / entertainment

'ಬಿರಿಯಾನಿ ಅಂದ್ರೆ ಪುನೀತ್‌ ಅವ್ರಿಗೆ ಪಂಚಪ್ರಾಣ..': ನವಯುಗ ಹೋಟೆಲ್ ಮಾಲೀಕ​ ಮೋಹನ್ ರಾವ್

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಅವರು ಭೋಜನಪ್ರಿಯ. ಅದರಲ್ಲೂ ಮಾಂಸಹಾರ ಊಟ ಅಂದ್ರೆ ಅವರಿಗೆ ಪಂಚಪ್ರಾಣವಂತೆ.

ಪುನೀತ್ ರಾಜ್​ಕುಮಾರ್
ಪುನೀತ್ ರಾಜ್​ಕುಮಾರ್

ಬೆಂಗಳೂರು: ದೊಡ್ಮನೆ ಮಗ ಹಾಗೂ ಕೋಟ್ಯಂತರ ಅಭಿಮಾನಿಗಳ ಆರಾಧಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅಗಲಿ ನಾಳೆಗೆ ಒಂದು ವರ್ಷ. ಆದರೆ ವರ್ಷ ಕಳೆದರೂ ಅವರ ಸ್ಮರಣೆ ಮಾತ್ರ ನಿಂತಿಲ್ಲ. ಈ ಮಧ್ಯೆ ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ಸಿನಿಮಾ ವಿಶ್ವಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಒಂದು ಸಲ ಗಂಧದ ಗುಡಿ ಚಿತ್ರ ನೋಡಿದ ಮೇಲೆ ಮನಸ್ಸು ಭಾರವಾಗಿ ನಿಮಗೆ ಗೊತ್ತಿಲ್ಲದೆ ಕಣ್ಣೀರು ಬರೋದು ಪಕ್ಕಾ. ಸದಾ ನಗ್ತಾ ಖುಷಿ ಖುಷಿಯಾಗಿ ಜೀವನ ಮಾಡುತ್ತಿದ್ದ ನಟ ಬಾರದ ಲೋಕಕ್ಕೆ ಪಯಣಿಸಿ ಒಂದು ವರ್ಷ ಉರುಳಿದೆ.

ಅಪ್ಪು ಅವರ ಬದುಕಿನತ್ತ ದೃಷ್ಟಿ ಹೊರಳಿಸಿದ್ರೆ ಅವರೊಬ್ಬ ಭೋಜನಪ್ರಿಯ ಆಗಿದ್ದರು. ಅದರಲ್ಲಿಯೂ ಮಾಂಸಹಾರ ಊಟ ಅಂದ್ರೆ ಅಪ್ಪುಗೆ ಪಂಚಪ್ರಾಣ. ತಮ್ಮ ತಂದೆ ಡಾ.ರಾಜ್‌ಕುಮಾರ್ ಅವರಂತೆ ಊಟ ಅಂದ್ರೆ ಅಚ್ಚುಮೆಚ್ಚು. ಅದರಲ್ಲೂ ಮೆಜೆಸ್ಟಿಕ್​ನಲ್ಲಿರುವ ನವಯುಗ ಹೋಟೆಲ್​ನ ಚಿಕನ್ ಬಿರಿಯಾನಿ ಹಾಗೂ ನಾಟಿ ಶೈಲಿಯ ಚಿಕನ್ ಊಟ ಅಂದ್ರೆ ಇನ್ನೂ ಖುಷಿಯಂತೆ.

ನವಯುಗ ಹೋಟೆಲ್ ಮಾಲೀಕ ಮೋಹನ್​ ರಾವ್ ಅವರು ಮಾತನಾಡಿದರು

ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನವಯುಗ ಹೋಟೆಲ್​​ ಮಾಲೀಕ ಮೋಹನ್ ರಾವ್ ಅವರು ಅಪ್ಪು ಹೆಸರಲ್ಲಿ ಫುಡ್ ಫೆಸ್ಟಿವಲ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಇಂದು ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ರಾಜ್​ಕುಮಾರ್​ ಕುಟುಂಬ ಕಾರಣ ಅಂತಾರೆ ಅವರು.

ಮೋಹನ್ ರಾವ್ ಹಾಗೂ ರಾಜ್ ಕುಮಾರ್ ಅವರ ಪರಿಚಯ ಆಗಿದ್ದು ಕೂಡಾ ಇದೇ ಊಟದ ಸಲುವಾಗಿ. 1981ರಲ್ಲಿ ಎಟಿಎನ್​​ ಎಂಬ ಹೋಟೆಲ್ ಅನ್ನು​ ಮೋಹನ್ ರಾವ್ ನಡೆಸುತ್ತಿದ್ದರಂತೆ. ಒಮ್ಮೆ ರಾಜ್ ಕುಮಾರ್ ಸಿನಿಮಾ ಮ್ಯಾನೇಜರ್ ಧನರಾಜ್ ಎಂಬುವರು ನಮ್ಮ ಹೋಟೆಲ್​ನಿಂದ ಊಟ ತೆಗೆದುಕೊಂಡು ಹೋಗಿದ್ರಂತೆ. ಅದರಲ್ಲಿ ದಾಲ್ ಸವಿದಿರುವ ರಾಜ್‌ಕುಮಾರ್ ಅವರು, ಯಾವ ಊಟನಾಪ್ಪ ಅಂತಾ ಕೇಳಿದ್ರಂತೆ. ಅಂದಿನಿಂದ ಈ ಮೋಹನ್ ರಾವ್ ಹೋಟೆಲ್​ನಿಂದ ರಾಜ್​ಕುಮಾರ್ ಅವ್ರಿಗೆ ಶೂಟಿಂಗ್ ಊಟ ತೆಗೆದುಕೊಂಡು ಹೋಗಿ ಪರಿಚಯ ಆಗಿ, ಒಂದು ದಿನ ಅಣ್ಣಾವ್ರ ಶ್ರಾವಣ ಬಂತು ಹಾಗು ನಟಸಾರ್ವಭೌಮ ಎಂಬ ಸಿನಿಮಾಗಳನ್ನು ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದ್ರಂತೆ.

ಇದರ ಜೊತೆಗೆ ಕಂಠೀರವ ಸ್ಟುಡಿಯೋದಲ್ಲಿ ಜ್ವಾಲಾಮುಖಿ ಸಿನಿಮಾ ಶೂಟಿಂಗ್ ಸ್ಪಾಟ್‌ಗೆ ಮೋಹನ್ ರಾವ್ ಮಾಂಸಹಾರ ಊಟವನ್ನು ತೆಗೆದುಕೊಂಡು ಹೋಗಿದ್ರಂತೆ. ಆಗ ಅಣ್ಣಾವ್ರು, ಪಾರ್ವತಮ್ಮ ಜೊತೆ ಆ ಮಾಂಸಹಾರ ಊಟವನ್ನು ಬಹಳ ಸಂತೋಷಪಟ್ಟು ಮಾಡಿದ್ರಂತೆ.

ಅಪ್ಪನಂತೆ ಪುನೀತ್ ರಾಜ್ ಕುಮಾರ್​ ಅವರಿಗೂ ನವಯುಗ ಹೋಟೆಲ್​ನ ಚಿಕನ್ ಬಿರಿಯಾನಿ, ನಾಟಿ ಸ್ಟೈಲ್ ಚಿಕನ್, ಕಬಾಬ್, ಆಂಧ್ರಶೈಲಿ ಸಾಂಬಾರ್ ಅಂದ್ರೆ ಅಚ್ಚುಮೆಚ್ಚಂತೆ. ಮೋಹನ್ ರಾವ್ ಹೇಳುವಂತೆ, ಅಪ್ಪು ಅವರು ಸಿನಿಮಾ ಹೀರೋ ಆಗೋದಿಕ್ಕಿಂತ ಮುಂಚೆ ವಾರಕ್ಕೆ ಮೂರು ದಿನ ನಮ್ಮ ಹೋಟೆಲ್​ಗೆ ಸ್ನೇಹಿತರ ಜೊತೆ ಬಂದು ಊಟ ಮಾಡಿಕೊಂಡು ಹೋಗ್ತಿದ್ದರು. ಸಿನಿಮಾ ಹೀರೋ ಆದ್ಮೇಲೆ ಅಪ್ಪು ಹೊಟೇಲ್‌ಗೆ ಬರೋದು ಕಡಿಮೆ ಆಯ್ತು ಅಂತಾರೆ.

ಪುನೀತ್ ಅಭಿನಯಿಸಿರೋ ಅಪ್ಪು, ಮಿಲನ ಹಾಗೂ ರಾಜಕುಮಾರ ಸಿನಿಮಾಗಳು ಅಂದ್ರೆ ಮೋಹನ್​ರಾವ್​ಗೆ ಅಚ್ಚುಮೆಚ್ಚು. ನಾನು ಬೆಂಗಳೂರಿನಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯೋದಕ್ಕೆ ಕಾರಣ ಅಣ್ಣಾವ್ರು ಹಾಗೂ ಪುನೀತ್ ರಾಜ್ ಕುಮಾರ್ ಅಂತಾರೆ ಮೋಹನ್. ಇನ್ನು ಪುನೀತ್ ರಾಜ್ ಕುಮಾರ್ ಬದುಕಿದ್ದಿದ್ದರೆ ಇಂದು 500 ಕೋಟಿ ರೂ ಹಣವನ್ನು ಬಡವರ ಸಹಾಯಕ್ಕೆ ಎತ್ತಿಡುತ್ತಿದ್ದರು ಅಂತಾ ಮೋಹನ್ ರಾವ್ ಹೇಳಿದರು.

ಇದನ್ನೂ ಓದಿ:ಗಂಧದ ಗುಡಿ ಅಪ್ಪು ಕೊನೆಯ ಚಿತ್ರವಲ್ಲ, ಇದು ಆರಂಭ: ಶಿವರಾಜ್ ಕುಮಾರ್

ABOUT THE AUTHOR

...view details