ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿ ಇಂದಿಗೆ ಒಂದು ವರ್ಷ. ಸದಾ ಲವಲವಿಕೆಯಿಂದ ಇರುತ್ತಿದ್ದ ಅಪ್ಪು ಅವರ ಹಠಾತ್ ಅಗಲಿಕೆ ರಾಜ್ಯಕ್ಕೆ ದೊಡ್ಡ ಶಾಕ್ ನೀಡಿತ್ತು. ಅಷ್ಟೇ ಅಲ್ಲದೆ ದೇಶ, ವಿದೇಶಗಳಲ್ಲಿರುವ ಅಪ್ಪು ಅಭಿಮಾನಿಗಳು ಕೂಡ ಮಮ್ಮಲ ಮರುಗಿದ್ದರು.
ಅಂದು ಆಗಿದ್ದೇನು?: ಇಡೀ ರಾಜ್ಯಕ್ಕೆ 2021 ರ ಅಕ್ಟೋಬರ್ 29 ಕರಾಳ ದಿನವಾಗಿತ್ತು. ಅಂದು ಬೆಳಗ್ಗೆ ಸದಾಶಿವನಗರದ ಪಾರ್ಕ್ನಲ್ಲಿ ವಾಕಿಂಗ್ ಮಾಡಿ ನಂತರ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಪುನೀತ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರು ಪತ್ನಿ ಜೊತೆ ಮನೆ ಸಮೀಪವೇ ಇದ್ದ ಫ್ಯಾಮಿಲಿ ಡಾಕ್ಟರ್ ರಮಣಶ್ರೀ ಅವರ ಕ್ಲಿನಿಕ್ಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಆರೋಗ್ಯವನ್ನು ವೈದ್ಯರು ಪರಿಶೀಲಿಸಿದ್ದರು. ಆಗ ಅಪ್ಪು ಅವರ ಇಸಿಜಿ ರಿಪೋರ್ಟ್ನಲ್ಲಿ ಏರುಪೇರು ಕಂಡು ಬಂದಿತ್ತು. ಆಗ ಅಲ್ಲಿನ ವೈದ್ಯರು, ತಕ್ಷಣವೇ ವಿಕ್ರಂ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದರು.
ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನದ ಕ್ಷಣ ವಿಕ್ರಂ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಪುನೀತ್ಗೆ ತೀವ್ರ ಹೃದಯಾಘಾತವಾಗಿ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಿದರಾದರೂ ಫಲಕಾರಿಯಾಗದೆ ಪುನೀತ್ ರಾಜ್ ಕುಮಾರ್ ಅಂದು ಇಹಲೋಕ ತ್ಯಜಿಸಿದ್ದರು.
ವರನಟ ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975 ರಲ್ಲಿ ಜನಿಸಿದ ಪುನೀತ್ (ಲೋಹಿತ್) ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ಅಪ್ಪು ಚಿತ್ರದ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿದ ಪುನೀತ್, ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಬಾಲನಟನಿಂದ ನಾಯಕನಾಗಿ ಜನಮನ ಗೆದ್ದರು. 46ನೇ ವಯಸ್ಸಿನೊಳಗೆ ಅದೆಷ್ಟೋ ಸಾಧನೆ ಮಾಡಿದ್ದರು. ಆದರೆ, ಅಷ್ಟರಲ್ಲೇ ವಿಧಿ ಬೇರೆಯದೆ ಆಟ ಆಡಿತ್ತು.
ಅಪ್ಪು ಅಂತಿಮ ದರ್ಶನ ಪಡೆದ ಅಭಿಮಾನಿಗಳು ಪುನೀತ್ ಅವರಿಗೆ ಹೃದಯಾಘಾತವಾಗಲು ಕಾರಣ ಏನೆಂಬುದನ್ನು ತಜ್ಞರು ಹೇಳಿರುವ ಪ್ರಕಾರ, ಹೃದಯದ ಮುಂದಿನ ಭಾಗದ ರಕ್ತನಾಳ ಮುಚ್ಚಿ ಹೃದಯಾಘಾತ ಆಗಿದೆ. ಹೃದಯಾಘಾತವಾದಾಗ ಹೃದಯ ತನ್ನ ಕೆಲಸ ನಿಲ್ಲಿಸಿದ್ರೆ ಕಾರ್ಡಿಯಾಕ್ ಅರೆಸ್ಟ್ ಎನ್ನುತ್ತಾರೆ. ಪುನೀತ್ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಕಾರಣ. ಹೃದಯಾಘಾತ ಆಗುವ ಮುನ್ನ ಎದೆನೋವು ಕಾಣಿಸಿಕೊಳ್ಳುತ್ತದೆ. ತಕ್ಷಣ ಚಿಕಿತ್ಸೆ ಪಡೆದರೆ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ.
ತೀವ್ರವಾಗಿ ವ್ಯಾಯಾಮ ಮಾಡಿದಾಗ ರಕ್ತದೊತ್ತಡ ಹೆಚ್ಚಿದಾಗ, ರಕ್ತನಾಳದಲ್ಲಿ ರಕ್ತ ಜೋರಾಗಿ ಹರಿದಾಗ, ಯಾವುದೋ ಸಣ್ಣ ಬ್ಲಾಕ್ ಸುತ್ತ ರಕ್ತ ಹೆಪ್ಪುಗಟ್ಟಿ ಹೃದಯಾಘಾತವಾಗಿರುವ ಸಾಧ್ಯತೆ ಇದೆ. ಪುನೀತ್ ಅವರ ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇರುವುದರಿಂದ ಇವರಿಗೂ ಹೃದಯಾಘಾತ ಆಗಿರಬಹುದು ಎನ್ನುತ್ತಾರೆ ಅವರು.
ಅಪ್ಪು ಅಂತಿಮ ದರ್ಶನಕ್ಕೆ ನೆರೆದ ಅಭಿಮಾನಿಗಳು ವಿಟಮಿನ್ ಹಾಗೂ ಪ್ರೋಟಿನ್ ಪೌಡರ್ ತೆಗೆದುಕೊಳ್ಳುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ. ಎಷ್ಟೋ ಬಾರಿ ಚಿಕ್ಕಚಿಕ್ಕ ಮಕ್ಕಗಳಿಗೆ ರಕ್ತನಾಳದಲ್ಲಿ ಬ್ಲಾಕ್ ಇರುತ್ತದೆ. ವಯಸ್ಸಾದಂತೆ ಬ್ಲಾಕ್ ದೊಡ್ಡದಾಗುತ್ತದೆ. 40 ರಿಂದ 45 ವರ್ಷಕ್ಕೆ ಸ್ವಲ್ಪ ದೊಡ್ಡದಾಗಿ ಬೆಳೆದಿದ್ದು, ಬ್ಲಾಕ್ ದೊಡ್ಡದಾಗಿ ಹೃದಯಾಘಾತ ಆಗುವ ಸಂಭವ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಯುವಕರ ಒತ್ತಡದ ಜೀವನ ಶೈಲಿ: ಯುವಕರ ಒತ್ತಡದ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆ ಬಂದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಜಿಮ್ ಮಾಡಿದರೆ ಅಡ್ಡಪರಿಣಾಮಗಳು ಸಂಭವಿಸುತ್ತವೆ ಎಂಬುದು ಸುಳ್ಳು. ದೇಹ ಬಲಿಷ್ಠವಾಗಿಟ್ಟುಕೊಳ್ಳಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಮಾಡಬೇಕು. ಪುನೀತ್ ರಾಜಕುಮಾರ್ ಸಾವಿಗೆ ದೈಹಿಕ ಕಸರತ್ತು, ಜಿಮ್ ಕಾರಣವಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: 'ಮನೇಲಿ ಹೆಂಡ್ತಿ ಮಕ್ಕಳು ಕಾಯ್ತಿರ್ತಾರೆ...': ಹೃದಯ ಕಲುಕಿದ ಅಪ್ಪು ಮಾತು