ಕನ್ನಡ ಚಿತ್ರರಂಗದ ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೇವಲ ಸಿನಿಮಾ ಮಾತ್ರವಲ್ಲದೇ ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿದ್ದರು. ಅವರು ನಿಧನರಾಗಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸ್ಮರಣೆ ವಿವಿಧ ರೀತಿಯಲ್ಲಿ ನಡೆಯುತ್ತಿದೆ.
ಎರಡು ತಿಂಗಳ ಮಗುವಾಗಿದ್ದಾಗಲೇ ಪುನೀತ್ ರಾಜ್ಕುಮಾರ್ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. ದೊಡ್ಮನೆ ಮಗ ಪುನೀತ್ ಮನೋರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವ ಮೂಲಕ ಸೈ ಎನ್ನಿಸಿಕೊಂಡಿದ್ದರು.
ಹೌದು, ವರನಟ ರಾಜ್ಕುಮಾರ್ ಹಾಕಿಕೊಟ್ಟ ಮಾರ್ಗವನ್ನು ಚಾಚೂ ತಪ್ಪದೇ ಪಾಲಿಸಿಕೊಂಡ ಬಂದ ಪುನೀತ್ ಅವರು ಅಪ್ಪನಂತೆ ಅಭಿಮಾನಿಗಳ ಮನಸ್ಸಿನಲ್ಲಿ ರಾಜರತ್ನನಾಗಿದ್ದಾರೆ. ಈ ಯುವರತ್ನ ಒಬ್ಬ ಕಮರ್ಷಿಯಲ್ ಹೀರೋ ಆಗಿ ಅಲ್ಲದೇ ಸಮಾಜಕ್ಕೆ ಏನಾದರು ಸಂದೇಶ ಕೊಡಬೇಕು ಅನ್ನೋ ಮಾರ್ಗದಲ್ಲಿ ನಡೆದವರು. ಈ ಮಾತಿಗೆ ಪೂರಕವಾಗಿ ಮೊದಲಿಗೆ ನೆನಪಿಗೆ ಬರೋ ಸಿನಿಮಾ ಅಂದ್ರೆ ಅದು ಗಂಧದ ಗುಡಿ ಸಿನಿಮಾ.
ನಿರ್ದೇಶಕ ಅಮೋಘವರ್ಷ ಹೇಳುವ ಹಾಗೆ, ಈ ಸಿನಿಮಾ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡುವ ಚಿತ್ರ. ಇದು ಅಪ್ಪು ಸರ್ ಕನಸು ಕೂಡ ಹೌದು. ನಮ್ಮ ಅರಣ್ಯ ಸಂಪತ್ತು, ಪ್ರಾಣಿ ಸಂಕುಲದ ಬಗ್ಗೆ ಪುಸ್ತಕದಲ್ಲಿ ನೋಡುವ ಕಾಲ ಬರುತ್ತಿದೆ. ಈ ಕಾರಣಕ್ಕೆ ಅಪ್ಪು ಸರ್ ಈ ಗಂಧದ ಗುಡಿ ಸಿನಿಮಾವನ್ನು ಮಾಡಿದ್ದು ಅಂತಾರೆ ನಿರ್ದೇಶಕ ಅಮೋಘವರ್ಷ. ಈ ಚಿತ್ರದಲ್ಲಿ ನಮ್ಮ ಪ್ರಾಕೃತಿಕ ಸಂಪತ್ತಿನ ವೈಭವೀಕರಣ ಆಗಿದೆ.
ಇನ್ನು, ಈ ಸಿನಿಮಾಗೂ ಮುನ್ನ ಪುನೀತ್ ರಾಜ್ಕುಮಾರ್ ಎಂಟರ್ಟೈನ್ಮೆಂಟ್ ಜೊತೆಗೆ ಸಾಮಾಜಿಕ ಸಂದೇಶ ಇರುವ ಸಿನಿಮಾಗಳನ್ನು ಮಾಡಿದ್ದಾರೆ. ಅದುವೇ ಪೃಥ್ವಿ ಸಿನಿಮಾ. ನಮ್ಮ ನಾಡಿನಲ್ಲಿ ನಡೆದ ಗಣಿಗಾರಿಕೆ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಿದೆ. ಈ ಚಿತ್ರದಲ್ಲಿ ಖಡಕ್ ನಿಷ್ಠಾವಂತ ಡಿಸಿಯಾಗಿ ಅಭಿನಯಿಸುವ ಮೂಲಕ ಸಮಾಜಕ್ಕೆ ಸಂದೇಶ ಕೊಟ್ಟಿದ್ದರು. ಈ ಚಿತ್ರ ಬಿಡುಗಡೆ ಆದಾಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಆಗಿತ್ತು. ಈ ಸಿನಿಮಾವನ್ನು ಜೇಕಬ್ ವರ್ಗೀಸ್ ನಿರ್ದೇಶನ ಮಾಡಿದ್ದರು.