ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಸಾವು ಸಂಭವಿಸಿ ಇಂದಿಗೆ ಎರಡು ವರ್ಷವಾಗುತ್ತಿದೆ. ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುವ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದವರು ಅಪ್ಪು. ಹಾಗಾಗಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಅವರು ಅಚ್ಚಳಿಯದ ನೆನಪಾಗಿದ್ದಾರೆ.
ಪುಣ್ಯಸ್ಮರಣೆ ವಿಧಿವಿಧಾನಕ್ಕೆ ಸಿದ್ಧತೆ:ಅಪ್ಪುಪುಣ್ಯಸ್ಮರಣೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಶನಿವಾರವೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಜ್ ಕುಟುಂಬಸ್ಥರು ಈ ಸಮಾಧಿ ನಿರ್ಮಿಸಿದ್ದಾರೆ. ಬಿಳಿ ಮಾರ್ಬಲ್ನಲ್ಲಿ ಸಮಾಧಿ ನಿರ್ಮಿಸಲಾಗಿದೆ. ಇದರ ಮೇಲೆ ನಗುಮೊಗದ ಪುನೀತ್ ಫೋಟೋ ನೋಡಬಹುದು. ಸಮಾಧಿ ಸುತ್ತಲ ಪ್ರದೇಶಕ್ಕೆ ಬಿಳಿ ಬಣ್ಣದ ಕಲ್ಲಿನ ಚಪ್ಪಡಿ ಹೊದಿಸಲಾಗಿದೆ. ಅಣ್ಣಾವ್ರ ಸ್ಮಾರಕದಂತೆಯೇ ಪುತ್ರನ ಸ್ಮಾರಕವನ್ನೂ ರಚಿಸಲಾಗಿದೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಮಕ್ಕಳು ಸಮಾಧಿ ಬಳಿ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಶಿವ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಸರತಿ ಸಾಲಿನಲ್ಲಿ ನಿಂತ ಅಭಿಮಾನಿಗಳು: ಡಾ.ರಾಜ್‌ಕುಮಾರ್, ಪಾರ್ವತಮ್ಮ ಹಾಗು ಪುನೀತ್ ರಾಜ್‌ಕುಮಾರ್ ಸಮಾಧಿಗಳನ್ನು ವಿವಿಧ ಹೂಗಳಿಂದ ಶೃಂಗರಿಸಲಾಗಿದೆ. ಪ್ರಾರ್ಥನೆ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿಯತ್ತ ಆಗಮಿಸುತ್ತಿದ್ದಾರೆ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡುಬಂತು.