ಬೆಂಗಳೂರು: ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಹಲವು ತಿಂಗಳಾಗಿದ್ದು, ಜನಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಪುನೀತ್ ಹೆಸರಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಜೊತೆಗೆ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ಜನರು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಈ ಸಮಯದಲ್ಲಿ ಟ್ವಿಟರ್ ಅಪ್ಪು ಅವರಿಗೆ ಅವಮಾನ ಮಾಡಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಟ್ವಿಟರ್ ಖಾತೆಯಿಂದ ಬ್ಲ್ಯೂ ಟಿಕ್ ಅಥವಾ ನೀಲಿ ಗುರುತನ್ನು ತೆಗೆದುಹಾಕಿದ್ದೇ ಇದಕ್ಕೆ ಕಾರಣ.
ಬ್ಲ್ಯೂ ಟಿಕ್ ಅಂದ್ರೆ ಏನು?ಪ್ರಸಿದ್ಧ ವ್ಯಕ್ತಿಗಳ ಹೆಸರಿನಲ್ಲಿ ಹಲವು ಜನರು ಅಥವಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿರುತ್ತಾರೆ. ಹೀಗಾದಾಗ ಅವರ ಅಧಿಕೃತ ಖಾತೆ ಯಾವುದೆಂದು ಗುರುತಿಸುವ ಬಗ್ಗೆ ಗೊಂದಲ ಇರುತ್ತದೆ. ಹಾಗಾಗಿ ಟ್ವಿಟರ್ ಸೇರಿದಂತೆ ಬಹುತೇಕ ಎಲ್ಲ ಸೋಶಿಯಲ್ ಮೀಡಿಯಾ ಸಂಸ್ಥೆಗಳು ಸೆಲೆಬ್ರೆಟಿಗಳ ಖಾತೆಯ ಮುಂದೊಂದು ನೀಲಿ ಟಿಕ್ ಅನ್ನು ನೀಡಿರುತ್ತವೆ. ಸದ್ಯ ಪುನೀತ್ ಅವರ ಟ್ವಿಟರ್ ಖಾತೆಯಲ್ಲಿ ಬ್ಲ್ಯೂ ಟಿಕ್ ಅನ್ನು ತೆಗೆಯಲಾಗಿದ್ದು, ಇದು ಅಪ್ಪು ಅವರಿಗೆ ಮಾಡಿದ ಅವಮಾನವೆಂದು ಟ್ವಿಟರ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.