ನಗು ಮುಖದ ಒಡೆಯ ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದೂವರೆ ವರ್ಷ ಆಗ್ತಾ ಬರ್ತಾ ಇದೆ. ಆದರೆ, ಈ ಪರಮಾತ್ಮನ ಬಗ್ಗೆ ಅಭಿಮಾನಿಗಳು ದಿನ ನಿತ್ಯ ಪೂಜೆ ಮಾಡೋದನ್ನು ಮಾತ್ರ ನಿಲ್ಲಿಸಿಲ್ಲ. ಯಾಕೆಂದರೆ ಪವರ್ ಸ್ಟಾರ್ ಬದುಕಿದ ರೀತಿ ಹಾಗೂ ಮಾಡಿರೋ ಸಹಾಯ ಮತ್ತು ಒಳ್ಳೆ ಕೆಲಸಗಳು ಪುನೀತ್ ರಾಜ್ ಕುಮಾರ್ ಅವರನ್ನು ಇನ್ನೂ ನೆನಪಿಸುತ್ತಲೇ ಇವೆ.
ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ತಮ್ಮ ಏರಿಯಾ ಹಾಗು ಊರುಗಳ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಡುವ ಮೂಲಕ ಅಪ್ಪು ಹೆಸರನ್ನು ಶಾಶ್ವತವಾಗಿಸಿದ್ದಾರೆ. ಈಗ ಬೆಂಗಳೂರಿನ ರಿಂಗ್ ರಸ್ತೆಗೆ ಪವರ್ ಸ್ಟಾರ್ ಹೆಸರು ಇಡಲು ವೇದಿಕೆ ಸಿದ್ಧವಾಗಿದೆ. ಈ ವಿಷಯವಾಗಿ ಕಂದಾಯ ಸಚಿವ ಆರ್ ಅಶೋಕ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ಮಾಡಿದರು. ಅಧ್ಯಕ್ಷ್ಯ ಭಾ.ಮಾ ಹರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಚೇಂಬರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ಆರ್ ಅಶೋಕ್ ಮಾತನಾಡಿ, ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗೂ ಪುನೀತ್ ರಾಜ್ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಸುಮಾರು 12 ಕಿಲೋಮೀಟರ್ ಉದ್ದ ಇರುವ ಈ ರಸ್ತೆಗೆ ಅಪ್ಪು ಹೆಸರಿಡಲಾಗಿದೆ. ಇಷ್ಟು ಉದ್ದದ ರಸ್ತೆಗೆ ಇದುವರೆಗೂ ಯಾರ ಹೆಸರು ಇಟ್ಟಿಲ್ಲ. ಇದೀಗ ಮೊದಲ ಬಾರಿಗೆ ಅಪ್ಪು ಹೆಸರಿಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಹಳ್ಳಿ ಹಳ್ಳಿಗಳಲ್ಲೂ ಪುನೀತ್ ಫೋಟೋ:ಇನ್ನು ಪುನೀತ್ ಅವರು ನಮ್ಮ ಮಧ್ಯೆ ಇಲ್ಲ. ನಾನು ಇತ್ತೀಚಿಗೆ ಲಂಬಾಣಿ ತಾಂಡಗಳಿಗೆ ಭೇಟಿ ಕೊಟ್ಟಿದ್ದೆ, ಹಳ್ಳಿ ಹಳ್ಳಿಗಳಲೂ ಪುನೀತ್ ರಾಜ್ ಕುಮಾರ್ ಅವರ ಫೋಟೊ ಇದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಸೌಧದ ಮುಂಭಾಗ ಕರ್ನಾಟಕ ಪ್ರಶಸ್ತಿ ಕೊಟ್ಟು ಗೌರವಿಸಿದ್ದಾರೆ. ನಮ್ಮ ಪುಣ್ಯ ಅನ್ಕೊತೀನಿ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಾಗ ಮಳೆ ಬಂದಿತ್ತು. ಪುನೀತ್ ಅವರಿಗೆ ಕೊಟ್ಟಾಗಲೂ ಅಲ್ಲಿ ಮಳೆ ಬಂದು ನಮಗೆ ಆಶೀರ್ವಾದ ಮಾಡಿತು ಎಂದು ಹೇಳಿದರು.