ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ F0R REGN (ಫಾರ್ ರಿಜಿಸ್ಟ್ರೇಷನ್) ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ. ಕರ್ನಾಟಕ ರಾಜ್ಯೋತ್ಸವದ ಶುಭದಿನದಂದು ಚಿತ್ರದ ಬಿಡುಗಡೆ ದಿನಾಂಕ ಹಾಗೂ ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣಗೊಂಡಿದೆ. ನಿರ್ಮಾಪಕ ನವೀನ್ ರಾವ್ ಹಾಗೂ ನಿರ್ದೇಶಕ ನವೀನ್ ದ್ವಾರಕನಾಥ್ ಅವರ ಪೋಷಕರು ಫಸ್ಟ್ ಲುಕ್ ಹಾಗೂ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದರು.
ನಾವಿಬ್ಬರೂ ಸಹಪಾಠಿಗಳು:ಮೊದಲಿಗೆ ಮಾತನಾಡಿದ ನಿರ್ದೇಶಕ ನವೀನ್ ದ್ವಾರಕನಾಥ್ ಅವರು, ನಾನು ಹಾಗೂ ನಿರ್ಮಾಪಕ ನವೀನ್ ರಾವ್ ಸಹಪಾಠಿಗಳು. ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ನನಗೆ ಒಂದು ದಿನ ನನ್ನ ಸ್ನೇಹಿತ ನವೀನ್ ರಾವ್ ಈ ಚಿತ್ರವನ್ನು ನಿರ್ದೇಶಿಸಲು ಪ್ರೇರೇಪಿಸಿದರು. ಪೃಥ್ವಿ ಅಂಬರ್ , ಮಿಲನ ನಾಗರಾಜ್ ನಾಯಕ ,ನಾಯಕಿ ಅಂಥ ನಿರ್ಧರಿಸಲಾಯಿತು. ಆಗ ಅವರಿಬ್ಬರ " ದಿಯಾ" ಹಾಗೂ "ಲವ್ ಮಾಕ್ಟೇಲ್" ಸಿನಿಮಾಗಳು ಯಶಸ್ವಿಯಾಗಿದ್ದವು. ಹೀಗೆ ಚಿತ್ರ ಆರಂಭವಾಗಿ ಈಗ ಬಿಡುಗಡೆ ಹಂತಕ್ಕೆ ತಲುಪಿದೆ ಎಂದರು.
ಪ್ರೀತಿಗೂ ರಿಜಿಸ್ಟ್ರೇಷನ್ :ಇನ್ನು ಪೃಥ್ವಿ ಅಂಬರ್ ಮಾತನಾಡಿ, ನಾನು ತುಳು ಸಿನಿಮಾ ಒಂದನ್ನು ಆಗಷ್ಟೇ ಮುಗಿಸಿದೆ. ಮಂಗಳೂರಿನಲ್ಲಿ ನಿರ್ದೇಶಕರು ಈ ಚಿತ್ರದ ಕಥೆ ಹೇಳಿದರು, ಇಷ್ಟವಾಯಿತು. ಎಲ್ಲದಕ್ಕೂ ರಿಜಿಸ್ಟ್ರೇಷನ್ ಕಡ್ಡಾಯ. ನಾವು ಪ್ರೀತಿಗೂ ರಿಜಿಸ್ಟ್ರೇಷನ್ ಕಡ್ಡಾಯವಾದರೆ ಹೇಗೆ ಎಂಬುದನ್ನು ತೋರಿಸಿದ್ದೇವೆ ಅಂದರು.