ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ, ಬಹುಬೇಡಿಕೆ ನಟ ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿರುವ ಪಠಾಣ್ ಸಿನಿಮಾ ಬುಧವಾರದಂದು ಸುಮಾರು 100 ದೇಶಗಳಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಶಾರುಖ್ ಖಾನ್ ಆ್ಯಕ್ಷನ್ ಅವತಾರ ಕಂಡ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ದೀಪಿಕಾ, ಜಾನ್ ಅಭಿನಯವನ್ನೂ ಮೆಚ್ಚಿ ಕೊಂಡಾಡುತ್ತಿದ್ದಾರೆ. ವಿವಾದದ ನಡುವೆ ತೆರೆಕಂಡ ಈ ಸಿನಿಮಾ ಮೆಚ್ಚುಗೆ ಜೊತೆಗೆ ವಿರೋಧವನ್ನೂ ಎದುರಿಸಿದೆ.
ಹಲವೆಡೆ ಪ್ರತಿಭಟನೆ ನಡೆದಿದೆ. ಚಿತ್ರಮಂದಿರಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಚಿತ್ರದ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಲಾಗುತ್ತಿದೆ. ಪಠಾಣ್ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿರುವ ಈ ಸಮಯದಲ್ಲಿ ಬಜರಂಗದಳದ ವಿರುದ್ಧ ಕೆಲ ಜನರ ಗುಂಪು ಧ್ವನಿ ಎತ್ತಿದೆ.
ಬಜರಂಗದಳದ ವಿರುದ್ಧ ಪ್ರತಿಭಟನೆ: ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ವಿವಾದದ ನಡುವೆ, ಕೆಲ ಬಜರಂಗದಳದ ಕಾರ್ಯಕರ್ತರು ಇಂದೋರ್‌ನಲ್ಲಿ ಮಾಡಿದ್ದ ಪ್ರಚೋದನಕಾರಿ ಘೋಷಣೆಗಳಿಗೆ ಪ್ರತೀಕಾರ ತೀರಿಸಲು ಕೆಲ ಜನರ ಗುಂಪು ದೇವಾಸ್ ಪ್ರದೇಶದ ಎಸ್‌ಪಿ ಕಚೇರಿ ಎದುರು ಜಮಾಯಿದರು. ಬುಧವಾರ ಸಂಜೆ ಈ ಗುಂಪು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಶಿವ್ ದಯಾಳ್ ಸಿಂಗ್ ಅವರ ಕಚೇರಿ ಎದುರು ರಸ್ತೆ ತಡೆದು ತಮ್ಮ ಆಕ್ರೋಶ ಹೊರಹಾಕಿದರು.
ಪೊಲೀಸ್ ಅಧಿಕಾರಿಗಳ ಮಾಹಿತಿ:ಎಸ್‌ಪಿ ಕಚೇರಿ ಎದುರು ಜಮಾಯಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಬ್ಬಿಸಲಾಗಿತ್ತು. ವಿಷಯ ಹರಡಿದ ನಂತರ ನೂರಾರು ಜನರು ತಮ್ಮ ಸಂಜೆಯ ಪ್ರಾರ್ಥನೆಯ ನಂತರ ಎಸ್‌ಪಿ ಕಚೇರಿ ಬಳಿ ಜಮಾಯಿಸಿದರು. ಬಳಿಕ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.