ಚೆನ್ನೈ (ತಮಿಳುನಾಡು): ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ 'ಲಿಯೋ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ. ಜೂನ್ 22, ವಿಜಯ್ ಜನ್ಮದಿನದಂದು 'ಲಿಯೋ'ದಿಂದ ಮೊದಲ ಹಾಡು ಮತ್ತು ಪೋಸ್ಟರ್ ಅನಾವರಣಗೊಂಡಿದೆ. ಹಾಡು ಬ್ಲಾಕ್ಬಸ್ಟರ್ ಆಗಿದ್ದರೂ ಸಹ, ಇದು ಇಡೀ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 'ನಾ ರೆಡಿ' ಹಾಡಿನಲ್ಲಿ ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ಉತ್ತೇಜಿಸಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ನಟ ವಿಜಯ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ 'ನಾ ರೆಡಿ' ಹಾಡು ಸಖತ್ ವೈರಲ್ ಆಗುತ್ತಿವೆ. ಈ ಮಧ್ಯೆ ಚೆನ್ನೈ - ಕೊರುಕುಪ್ಪೆಟ್‌ನ ಸಾಮಾಜಿಕ ಕಾರ್ಯಕರ್ತರೊಬ್ಬರು, 'ಲಿಯೋ' ಚಿತ್ರದ ಹಾಡು ಮಾದಕ ವ್ಯಸನಕ್ಕೆ ಉತ್ತೇಜಿಸುತ್ತದೆ ಮತ್ತು ರೌಡಿಸಂ ಅನ್ನು ಪ್ರೇರೇಪಿಸುತ್ತದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ನಟ ವಿಜಯ್ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆನ್ಲೈನ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಅರ್ಜುನ್ ಕಪೂರ್ ಹುಟ್ಟುಹಬ್ಬ ಆಚರಿಸಲು ಗೆಳೆಯನ ಮನೆಗೆ ಬಂದ ನಟಿ ಮಲೈಕಾ ಅರೋರಾ
ದೂರಿನಲ್ಲೇನಿದೆ?: "ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯದಲ್ಲಿ ಮಾದಕ ದ್ರವ್ಯ ತಡೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾದಕ ದ್ರವ್ಯ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಹೀಗಿರುವಾಗ ನಟ ವಿಜಯ್ 'ಲಿಯೋ' ಹಾಡಿನ ಸಾಹಿತ್ಯದ ಮೂಲಕ ಯುವಕರಲ್ಲಿ ಡ್ರಗ್ಸ್ಗೆ ಬೆಂಬಲ ನೀಡುತ್ತಿರುವುದು ಒಪ್ಪಲಾಗದು. ಹೀಗಾಗಿ ಯುವಕರನ್ನು ಮಾದಕ ವಸ್ತು ಸೇವನೆಗೆ ಪ್ರಚೋದಿಸಿದ್ದಕ್ಕಾಗಿ ನಟ ವಿಜಯ್ ಹಾಗೂ ಸಾಹಿತ್ಯ ಬರೆದವರ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. "ಇಂದು ಬೆಳಗ್ಗೆ 10 ಗಂಟೆಗೆ ನ್ಯಾಯಾಲಯದ ಮೂಲಕ ಅರ್ಜಿ ಸಲ್ಲಿಸಲಿದ್ದೇನೆ" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಲಿಯೋ': ನಟ ವಿಜಯ್ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್ ಮತ್ತು ಲೋಕೇಶ್ ಕನಕರಾಜ್ ಮತ್ತೆ ಒಂದಾಗಿದ್ದಾರೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಇದೇ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:Virender Sehwag: "ಆದಿಪುರುಷ ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ಅರಿವಾಯಿತು".. ವೀರು ವಿಡಂಬನಾತ್ಮಕ ವಿಮರ್ಶೆ