ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ನಿರ್ಮಾಪಕರಾದ ವಿಜಯ್ ಕುಮಾರ್ ಕಿರಗಂದೂರು ನಿರ್ಮಾಣದ ಇನ್ನೊಂದು ಚಿತ್ರ ಕಾಂತಾರ ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿಯನ್ನು ಪರಿಚಯಿಸುವ ಈ ಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶನ ಮಾಡಿದ್ದಾರೆ.
ಕಾಂತಾರ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆ ಎನ್ನುವ ರಿಷಬ್, ‘ನಾನು ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದೆ. ಅರಣ್ಯ ಇಲಾಖೆ, ಭೂಮಿ ಒತ್ತುವರಿ ... ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ. ದಕ್ಷಿಣ ಕನ್ನಡದಲ್ಲಿ ಭೂಮಿ ಎಂದರೆ ಅದು ಬರೀ ಭೂಮಿಯಲ್ಲ, ಅದೊಂದು ಸಂಸ್ಕೃತಿ. ಅಲ್ಲಿನ ದೈವ, ಕಂಬಳ, ಭೂತಕೋಲ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ ನಿರ್ದೇಶಕರು.
ಈ ಚಿತ್ರದ ವಿಶೇಷತೆಯೆಂದರೆ, ಅದು ಕಂಬಳದ ದೃಶ್ಯಗಳು. ಚಿತ್ರದಲ್ಲಿ ರಿಷಬ್ ಕೋಣ ಓಡಿಸಿದ್ದು, ಅದೇ ಚಿತ್ರದ ಹೈಲೈಟ್ ಎಂದು ಹೇಳಲಾಗುತ್ತಿದೆ. ‘ಇಲ್ಲಿ ನಾಯಕ ಎಂಥವನು ಎಂದು ತೋರಿಸುವುದಕ್ಕೆ ಕಂಬಳದ ದೃಶ್ಯವೂ ಇದೆ. ಈ ಚಿತ್ರಕ್ಕಾಗಿ ಒಂದಿಷ್ಟು ದಿನ ಅಭ್ಯಾಸ ಮಾಡಿ ಕಂಬಳದಲ್ಲಿ ಭಾಗವಹಿಸಿದೆ. ಊರಿನ ನಮ್ಮನೆ ಗದ್ದೆಯಲ್ಲೇ ಕಂಬಳದ ಚಿತ್ರೀಕರಣದ ನಡೆದಿದ್ದು. ಇಡೀ ಚಿತ್ರದ ಚಿತ್ರೀಕರಣ ನಮ್ಮ ಊರಿನ ಸುತ್ತಮುತ್ತ ಆಗಿದೆ’ ಎನ್ನುತ್ತಾರೆ ರಿಷಬ್.
ಚಿತ್ರವನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು ಮಾತನಾಡಿ, ‘ನಮ್ಮ ಹೊಂಬಾಳೆ ಸಂಸ್ಥೆಯು ಪ್ರತಿ ಚಿತ್ರದ ಮೂಲಕ ಒಂದು ಹೊಸ ತರಹದ ಪ್ರಯತ್ನ ಮತ್ತು ಪ್ರಯೋಗ ಮಾಡುತ್ತಿದೆ. ಕಾಂತಾರ ಸಹ ಅಂಥದ್ದೊಂದು ವಿಭಿನ್ನ ಪ್ರಯೋಗ. ರಿಷಬ್ ಇಲ್ಲಿ ದಕ್ಷಿಣ ಕನ್ನಡದ ವಿಶಿಷ್ಟ ಆಚರಣೆ ಮತ್ತು ಸಂಸ್ಕೃತಿಯನ್ನು ಕಟ್ಟಿಕೊಡುವುದರ ಜೊತೆಗೆ ಒಂದೊಳ್ಳೆಯ ಸಂದೇಶವನ್ನು ಹೇಳಿದ್ದಾರೆ.