ನಿನ್ನೆಯಷ್ಟೇ ಕಿಚ್ಚ 46ನೇ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಈ ಬೆನ್ನಲ್ಲೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎನ್ ಎಂ ಕುಮಾರ್ ಆರೋಪ ಮಾಡಿದ್ದಾರೆ. ನನ್ನ ಜೊತೆ ಸಿನಿಮಾ ಮಾಡ್ತೇನಿ ಎಂದು ಸುದೀಪ್ ಮುಂಗಡ ಹಣ ಪಡೆದು ಬಳಿಕ ಯಾವುದೇ ಪ್ರತಿಕ್ರಿಯೆ ನೀಡ್ತಿಲ್ಲ ಎಂದು ಎನ್ ಎಂ ಕುಮಾರ್ ಆರೋಪಿಸಿದ್ದಾರೆ.
ಚಲನ ಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, "ನಾನು ಈಗಾಗಲೇ ಸುದೀಪ್ ಜೊತೆಗೆ ಹಲವು ಸಿನಿಮಾ ಮಾಡಿದ್ದೇನೆ. ಸುಮಾರು 8 ವರ್ಷದಿಂದ ಅವರ ಜೊತೆ ಒಂದು ಸಿನಿಮಾ ಮಾಡಬೇಕಿತ್ತು. 'ಮುತ್ತತ್ತಿ ಸತ್ಯರಾಜ್' ಚಿತ್ರ ಮಾಡೋಣ ಎಂದು ಒಪ್ಪಿಕೊಂಡಿದ್ದರು. ನನ್ನ ಕಡೆಯಿಂದ ಇನ್ನೊಬ್ಬರಿಗೆ ಅಡ್ವಾನ್ಸ್ ಕೂಡ ಕೊಡಿಸಿದ್ದಾರೆ. ನಿರ್ದೇಶಕ ನಂದ ಕಿಶೋರ್ ಅವರನ್ನು ಸುದೀಪ್ ಅವರೇ ಕರೆಸಿದ್ದರು. ಹೈದರಾಬಾದ್ನಿಂದ ರೈಟರ್ನ ಕರೆಸಿ ಅಂದ್ರು. ಹಾಗಂತ ಕರೆಸಿದ್ರೆ ಅವರು ಭೇಟಿಯೂ ಮಾಡ್ಲಿಲ್ಲ. ಮನೆ ಹತ್ರ ಹೋದ್ರೆ ಮಾತಾಡೋಕು ಸಿಗೋದಿಲ್ಲ ಎಂದು ಆರೋಪಿಸಿದ್ದಾರೆ.
'ದುಡ್ಡು ಕೊಟ್ಟು ನಾವೇ ಬೇಡ್ಬೇಕು..ಚಿತ್ರರಂಗ ಉಳಿಯಬೇಕಾದ್ರೆ ನಿರ್ಮಾಪಕರು ಇರಲೇಬೇಕು. ಅವ್ರಿಗೆ ಹೀಗಾದ್ರೆ ಹೇಗೆ? ನಾನು 200 ಸಿನಿಮಾ ರಿಲೀಸ್ ಮಾಡಿದ್ದೀನಿ. ಇವರು ನೋಡಿದ್ರೆ ಸಿನಿಮಾ ಮಾಡ್ತೀನಿ ಅಂತ ಹೇಳಿ ಮಾತನಾಡುತ್ತಿಲ್ಲ. ದುಡ್ಡು ಕೊಟ್ಟು ನಾವು ಅವರ ಹತ್ತಿರ ಬೇಡಿಕೊಳ್ಳಬೇಕು. ಸುದೀಪ್ ಲೈವ್ ಬಂದರೆ ನಾನು ಪ್ರತಿ ದಾಖಲೆ ಕೊಡುತ್ತೇನೆ ಎಂದು ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.