ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳು ಮಂಡಳಿಯ ಚುನಾವಣಾ ರಣಕಣದಲ್ಲಿ ಯುದ್ದಕ್ಕೆ ಸಜ್ಜಾಗಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಹಿರಿಯ ನಿರ್ಮಾಪಕ ಎನ್.ಎಂ.ಸುರೇಶ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ತಮ್ಮ ಯೋಜನೆಗಳನ್ನು ವಿವರಿಸಿದರು. ತಮ್ಮ ನೇತೃತ್ವದ ತಂಡಕ್ಕೆ ಬೆಂಬಲ ಕೇಳುವುದರೊಂದಿಗೆ ವಾಣಿಜ್ಯ ಮಂಡಳಿಯ ಸಮಗ್ರ ಅಭಿವೃದ್ಧಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸದ್ಯ ಉಂಟಾಗಿರುವ ಸಮಸ್ಯೆಗೆ ತಮ್ಮ ತಂಡದ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು. "ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಹಿಂದೆ ಕಾವೇರಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಕಣದಲ್ಲಿರುವ ನಮ್ಮ ತಂಡ, ಸದಾ ಈ ಕನ್ನಡ ನಾಡಿನ ಅಸ್ಮಿತೆಯ ವಿಚಾರಗಳಿಗೆ ಬೆಂಬಲವಷ್ಟೇ ಅಲ್ಲದೇ, ಯಾವುದೇ ಹಂತದ ಹೋರಾಟ ಅಥವಾ ಯಾವುದೇ ತ್ಯಾಗಕ್ಕೆ ಸಿದ್ದರಿದ್ದೇವೆ" ಎಂದು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
"ಚುನಾವಣೆ ಎಂದರೆ ಕೇವಲ ಅಧಿಕಾರ ಅಥವಾ ಹುದ್ದೆಯ ನಿರೀಕ್ಷೆಯಲ್ಲ. 75 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಚಲನಚಿತ್ರೋದ್ಯಮದ ಸಮಗ್ರ ಅಭಿವೃದ್ಧಿ, ಆಧುನಿಕತೆ, ತಂತ್ರಜ್ಞಾನ ಹಾಗೂ ಹಿರಿಯ ಅನುಭವಿಗಳ ಸೂಕ್ತ ಸಲಹೆಗಳೊಂದಿಗೆ ಮಂಡಳಿಯ ಸಮಗ್ರ ಅಭಿವೃದ್ದಿಯನ್ನು ವಾಸ್ತವಿಕವಾಗಿ ಕಟ್ಟಿಕೊಡುವ ಕೆಲಸವಾಗಿದೆ. 30 ವರ್ಷಗಳಿಂದ ಚಿತ್ರೋದ್ಯಮದಲ್ಲಿರುವ ನಾನು ಕೇವಲ ಹುದ್ದೆಯ ಆಕಾಂಕ್ಷಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ಈ ಚುನಾವಣೆಯ ಸದಾವಕಾಶವನ್ನು ಬಳಸಿಕೊಂಡು ದಶಕಗಳಿಂದ ಇರುವ ವಾಣಿಜ್ಯ ಮಂಡಳಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವ ಸದುದ್ದೇಶ ಹೊಂದಿದ್ದೇವೆ" ಎಂದರು.
"ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಮಾರ್ಗದರ್ಶನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ದೇಶದಲ್ಲೇ ಒಂದು ಮಾದರಿ ಮಂಡಳಿಯನ್ನಾಗಿಸುವುದೇ ನಮ್ಮ ಗುರಿಯಾಗಿದೆ. ಚಿತ್ರರಂಗದಲ್ಲಿನ ನೌಕರರ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ನಟ ನಟಿಯರ ಗೌರವ ಹೆಚ್ಚಿಸುವ ವೇದಿಕೆ ಸೃಷ್ಟಿ ಮಾಡಬೇಕಿದೆ. ಅಲ್ಲದೇ, ನೆಲ, ಜಲ, ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಸೇತುವೆಯಂತೆ ಕೆಲಸ ಮಾಡುವ ಉದ್ದೇಶ ಹೊಂದಿದೆ" ಎಂದು ಹೇಳಿದರು.