ಬೆಂಗಳೂರು:ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಮಳೆಯ ಆರ್ಭಟಕ್ಕೆ ಸಿಲಿಕಾನ್ ಸಿಟಿಯ ಜನರು ಪರಿತಪಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಐಷಾರಾಮಿ ಪ್ರದೇಶವೆಂದು ಕರೆಸಿಕೊಂಡಿರುವ ಡಾಲರ್ಸ್ ಕಾಲೋನಿಯಲ್ಲೂ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ.
ರಾಜಕಾಲುವೆ ತುಂಬಿ ಹರಿದು ಲಹರಿ ಸಂಸ್ಥೆಯ ಲಹರಿ ವೇಲು ಮನೆ ಸೇರಿದಂತೆ ಹಲವು ಮನೆಗೆ ನೀರು ನುಗ್ಗಿದೆ. ಮನೆಯ ಕಾರು ಪಾರ್ಕಿಂಗ್, ಜಿಮ್ ರೂಮ್, ಲಿಫ್ಟ್ ರೂಮ್‌ಗೆ ಹಾನಿಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ನೀರು ಹೊರ ತೆಗೆದರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಬಿಬಿಎಂಪಿ ಕಮಿಷನರ್ ಸಮ್ಮುಖದಲ್ಲೇ ಲಹರಿ ವೇಲು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ:ದ.ಕನ್ನಡ, ಶಿವಮೊಗ್ಗದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ
ಎಷ್ಟು ಅಂತಾ ಬಿಬಿಎಂಪಿಯವರ ಜೊತೆ ಜಗಳ ಮಾಡಬೇಕು?. ಬದುಕೋಕೆ ನಾನು ಜಗಳ ಮಾಡಬೇಕಾ?. ನಮ್ಮ ಟ್ಯಾಕ್ಸ್ನಿಂದ ಬಿಬಿಎಂಪಿಗೆ ಲಕ್ಷಾಂತರ ರೂಪಾಯಿ ಬರುತ್ತದೆ. ಆ ದುಡ್ಡನ್ನು ಅವರವರ ಕಿಸೆಗೆ ತುಂಬಿಸಿಕೊಳ್ತಿದ್ದಾರೆ. ಅವರು ಹೆಂಡತಿ, ಮಕ್ಕಳ ಜೊತೆ ಚೆನ್ನಾಗಿದ್ದಾರೆ. ನಾವು ಮಾತ್ರ ಅತಿಯಾದ ಮಳೆ ಬಂದಾಗ ನಮ್ಮ ಮನೆ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಾವು ಸತ್ತ ಮೇಲೆ ನಮ್ಮ ಹೆಣ ತೆಗೆದುಕೊಂಡು ಹೋಗೋದಿಕ್ಕೆ ಬನ್ನಿ ಎಂದು ಲಹರಿ ವೇಲು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಬಿಬಿಎಂಪಿನಲ್ಲಿ ಡ್ಯೂಟಿ ಮಾಡ್ತಿಲ್ಲ ಲೂಟಿ ಮಾಡ್ತಿದ್ದಾರೆ. ಟ್ಯಾಕ್ಸ್ ಕಟ್ಟಲ್ವಾ? ಏನ್ ಮಾಡ್ತಿದ್ದಾರೆ ಅವರು?. ಬಿಬಿಎಂಪಿ ಮತ್ತು ಬಿಡಬ್ಲೂಎಸ್ಎಸ್ಬಿ ಹಣ ಲೂಟಿ ಮಾಡ್ತಿದೆ. ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಬಿಬಿಎಂಪಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಬಿಬಿಎಂಪಿ ಕಮೀಷನರ್ ಮುಂದೆಯೇ ಅಸಮಧಾನ ಹೊರಹಾಕಿದರು.