ಬೆಂಗಳೂರು: ರಾಜ್ಯ ಚುನಾವಣೆ ಅಖಾಡ ರಂಗೇರಿರುವಾಗಲೇ ಅನೇಕ ಮಂದಿ ಅದೃಷ್ಟ ಪರೀಕ್ಷೆ ಇಳಿಯುವುದು ಸಾಮಾನ್ಯ. ಇದೀಗ ಆ ಸಾಲಿಗೆ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ಎಂದು ಗುರುತಿಸಿಕೊಂಡಿರುವ ಕೆ ಮಂಜು ಧುಮುಕಲು ಮುಂದಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣದಿಂದ ಹೆಸರು ಮಾಡಿರುವ ಅವರು ಇದೀಗ ರಾಜ್ಯ ವಿಧಾನಸಭೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ತಮ್ಮ ಮಗ ಶ್ರೇಯಸ್ ಅವರ ಹೊಸ ಚಿತ್ರ 'ದಿಲ್ದಾರ್' ಸಿನಿಮಾ ಮುಹೂರ್ತದ ವೇಳೆ ತಮ್ಮ ರಾಜಕೀಯ ಪ್ರವೇಶ ಕುರಿತು ಮಾತನಾಡಿರುವ ಅವರು, ಈ ಬಾರಿ ಪದ್ಮನಾಭನಗರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಥಿಸುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಪದ್ಮನಾಭನಗರದಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಾರೋ ಅಥವಾ ಯಾವುದಾದರೂ ಪಕ್ಷ ಸೇರ್ಪಡೆ ಆಗಿ ಟೆಕೆಟ್ ಪಡೆದು ನಿಲುತ್ತಾರಾ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ಎಲ್ಲಾ ವಿವರಣೆಗಳನ್ನು ಇನ್ನೆರಡು ದಿನದೊಳಗೆ ಪ್ರಕಟಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರಾಜಕೀಯಕ್ಕೆ ಪ್ರವೇಶ ಮಾಡುವ ಸಂಬಂಧ ನಮ್ಮ ನಾಯಕರ ಜೊತೆಗೆ ಮಾತುಕತೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು. ಪದ್ಮನಾಭನಗರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಜನರ ಆಶೀರ್ವಾದ ಸಿಗಲಿದೆ. ಈ ಹಿನ್ನಲೆ ಆ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುವುದು ಖಚಿತ ಎಂದಿದ್ದಾರೆ.