ಬಾಲಿವುಡ್ ನಟ ಶಾರೂಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆಯಾಗಿದೆ. ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿನಿಮಾಗೆ ಪರ-ವಿರೋಧ ವ್ಯಕ್ತವಾಗಿದೆ. ಈ ಮಧ್ಯೆ ವಿಶ್ವಹಿಂದು ಪರಿಷತ್(ವಿಹೆಚ್‌ಪಿ) ಸಿನಿಮಾವನ್ನು ವೀಕ್ಷಣೆ ಮಾಡಿದ ಬಳಿಕ ಆಕ್ಷೇಪಗಳಿದ್ದಲ್ಲಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಹೇಳಿದೆ.
ವಿವಾದವೇನು?: ಹಿಂದು ಸಂಪ್ರದಾಯದ ಅವಹೇಳನ, ಅತಿಯಾದ ಅಶ್ಲೀಲತೆ, ಕೇಸರಿ ಬಣ್ಣದ ಬಿಕಿನಿಯಿಂದಾಗಿ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಹಿಂದುಪರ ಸಂಘಟನೆಗಳು ತೀವ್ರ ಪ್ರತಿಭಟನೆಗಳು ನಡೆಸಿದ್ದವು. ಬಳಿಕ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲಾಗುವುದು ಎಂದು ಸಿನಿಮಾ ತಂಡ ತಿಳಿಸಿತ್ತು.
ಇಂದು ಪಠಾಣ್ ತೆರೆಗೆ ಬಂದಿದೆ. ದೇಶದ ಹಲವೆಡೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸಿನಿಮಾ ಮಂದಿರಗಳ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಹೇಳಿಕೆ ನೀಡಿರುವ ವಿಶ್ವ ಹಿಂದು ಪರಿಷತ್ ವಕ್ತಾರ ಶ್ರೀರಾಜ್ ನಾಯರ್, "ಸದ್ಯಕ್ಕೆ ಪಠಾಣ್ ಚಿತ್ರವನ್ನು ವಿಎಚ್‌ಪಿ ವಿರೋಧಿಸುವುದಿಲ್ಲ. ಚಿತ್ರವನ್ನು ವೀಕ್ಷಿಸಿದ ನಂತರ ನಮ್ಮ ಈ ಹಿಂದಿನ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರದಲ್ಲಿ ಮಾಡಿದ ಬದಲಾವಣೆಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಆಕ್ಷೇಪಾರ್ಹ ದೃಶ್ಯಗಳು ಕಂಡುಬಂದರೆ ಚಿತ್ರವನ್ನು ವಿರೋಧಿಸುವ ಬಗ್ಗೆ ಮರುಪರಿಶೀಲಿಸುತ್ತೇವೆ" ಎಂದು ತಿಳಿಸಿದರು.
ಕೇಸರಿ ಬಿಕಿನಿಗಿಲ್ಲ ಕತ್ತರಿ:ಸಿನಿಮಾದ ರಿವ್ಯೂ ಪ್ರಕಾರ, ವಿವಾದಕ್ಕೆ ಕಾರಣವಾಗಿ ಭೇಷರಂ ಹಾಡಿನಲ್ಲಿ ನಟಿ ಹಾಕಿಕೊಂಡಿರುವ ಕೇಸರಿ ಬಣ್ಣದ ಬಿಕಿನಿ ದೃಶ್ಯವನ್ನು ತೆಗೆದು ಹಾಕಿಲ್ಲ ಎಂದು ತಿಳಿದುಬಂದಿದೆ. ಇದು ಸಿನಿಮಾ ಬಿಡುಗಡೆಗೂ ಮೊದಲು ದೊಡ್ಡ ವಿರೋಧಕ್ಕೆ ಕಾರಣವಾಗಿತ್ತು. ನಿರ್ಮಾಪಕ, ನಿರ್ದೇಶಕರು, ನಟ ಶಾರೂಖ್ ಆಕ್ಷೇಪಾರ್ಹ ದೃಶ್ಯ ತೆಗೆಯುವುದಾಗಿ ಹೇಳಿದ್ದರು.