ಮಮ್ಮಿ, ದೇವಿಕಾ, ಸೆಕೆಂಡ್ ಆಫ್ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕಾ ಉಪೇಂದ್ರ. ಡಿಟೆಕ್ಟಿವ್ ತೀಕ್ಷ್ಣ, ಮಿಸ್ ನಂದಿನಿ, ಹೀಗೆ ಹಲವು ಚಿತ್ರಗಳನ್ನು ಮಾಡ್ತಿರುವ ಇವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಕರ್ತ ಕರ್ಮ ಕ್ರಿಯ ಎಂಬ ವಿಭಿನ್ನ ಟೈಟಲ್ ಇಟ್ಟಿದ್ದು, ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ಶ್ರೀವಿನಾಯಕ ದೇವಾಲಯದಲ್ಲಿ ನೆರವೇರಿದೆ.
ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬ ಮಾತಿಗೆ ಅನುಗುಣವಾಗಿ ಕಥೆ ಹೊಂದಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ರಾಜಕಿರಣ್. ವೇದಾಂತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೇದಾಂತ್ ಗೌಡ ಹಾಗೂ ಶಿವ ರೆಡ್ಡಿ ನಿರ್ಮಾಣ ಮಾಡುತ್ತಿರುವ ಸಿನಿಮಾವನ್ನು ರಾಜಕಿರಣ್ ಜೆ. ನಿರ್ದೇಶಿಸುತ್ತಿದ್ದಾರೆ.