ಗ್ಲ್ಯಾಮರ್ ಜೊತೆಗೆ ತನ್ನ ವಿಶಿಷ್ಟ ಅಭಿನಯದಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಪ್ರಿಯಾಂಕ ಉಪೇಂದ್ರ. ಇವರ ಅಭಿನಯದ ಮಿಸ್ ನಂದಿನಿ ಸಿನೆಮಾದ ಆಫೀಶಿಯಲ್ ಟ್ರೈಲರ್ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮಿಸ್ ನಂದಿನಿ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅಮೋಘ ಅಭಿನಯ ನೋಡಿ, ಚಿತ್ರತಂಡ ಪ್ರಿಯಾಂಕ ಅವರಿಗೆ ಅಭಿನಯ ಅಪ್ಸರೆ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.
ಈ ಬಿರುದನ್ನು ಸ್ವೀಕರಿಸಿದ ಮಾತನಾಡಿದ ಪ್ರಿಯಾಂಕ, ಈ ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ. ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಧನ್ಯವಾದ. ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡಲು ಬಾರದಿದ್ದರೂ ನಿರ್ದೇಶಕರು ಸೆಟ್‌ನಲ್ಲಿ ಹೇಳಿಕೊಡುತ್ತಿದ್ದರು. ಮಕ್ಕಳ ಜತೆ ನಟಿಸುವುದೇ ಒಂದು ರೀತಿಯ ಖುಷಿ ಸಿಗುತ್ತದೆ. ಅವರುಗಳ ಹಾಸ್ಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸಿನಿಮಾಗಳಲ್ಲಿ ಮಾಡುತ್ತಿದ್ದರೂ ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ ಎಂದು ಹೇಳಿದರು.
ಈ ಚಿತ್ರವನ್ನು ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು. ಅಭಿಮಾನಿಗಳು ಪ್ರೀತಿಯಿಂದ ಬಿರುದನ್ನು ನೀಡಿದ್ದಾರೆ. ಅವರಿಂದಲೇ ಚಿತ್ರರಂಗದಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಲ್ಲಿಯ ತನಕ ಬಂದಿರುವುದಾಗಿ ಹೇಳಿದರು.
ಇನ್ನು ಪ್ರಿಯಾಂಕ ಉಪೇಂದ್ರ ಅಲ್ಲದೇ, ಮುಖ್ಯಮಂತ್ರಿಯಾಗಿ ಅಭಿನಯಿಸಿರುವ ಸಿದ್ಲಿಂಗು ಶ್ರೀಧರ್, ಶಿಕ್ಷಕರಾಗಿರುವ ಅಪ್ಪಣ್ಣ, ರಘು ಪಾಂಡೇಶ್ವರ್, ಅಧಿಕಾರಿಯಾಗಿರುವ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆಯಾಗಿ ಲಕ್ಷೀ ಸಿದ್ದಯ್ಯ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಸಾಯಿಸರ್ವೇಶ್ ನೀಡಿದ್ದಾರೆ.