ಮುಂಬೈ:ಬಾಲಿವುಡ್ನ ಬೆಡಗಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳ ಕುರಿತು ಸದಾ ಜನರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟಿ ಪ್ರಿಯಾಂಕಾ ತಮ್ಮ ನಟನೆಯ 'ಸಿಟಾಡೆಲ್' ವೆಬ್ ಸಿರಿಸ್ ಪ್ರಚಾರಕ್ಕಾಗಿ ಪತಿ ನಿಕ್ ಜೋಸನ್ ಜೊತೆ ಏ.2 ರಂದು ಭಾರತಕ್ಕೆ ಬಂದಿದ್ದಾರೆ.
'ಸಿಟಾಡೆಲ್' ವೆಬ್ ಸಿರಿಸ್ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು ತನಗೆ ಇಷ್ಟವಿಲ್ಲದ ಜನರೊಂದಿಗೆ ಕೆಲಸ ಮಾಡಲು ಇಚ್ಚಿಸುವುದಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಾಲಿವುಡ್ ರಾಜಕೀಯದ ಬಗ್ಗೆಯೂ ಮಾತುಗಳನ್ನು ಆಡಿದ್ದ ಅವರು, 'ಬಾಲಿವುಡ್‌ನಲ್ಲಿ ನಾನು ಮಾಡುತ್ತಿರುವ ಕೆಲಸದಿಂದ ನನಗೆ ಸಂತೋಷವಿರಲಿಲ್ಲ. ಇಂಡಸ್ಟ್ರಿಯಲ್ಲಿ ನನ್ನನ್ನು ಮೂಲೆಗೆ ತಳ್ಳಲಾಗಿತ್ತು. ನಾನು ಈ ರಾಜಕೀಯದಿಂದ ಬೇಸರಗೊಂಡಿದ್ದೆ. ಅಲ್ಲದೇ ನನಗೆ ಇದರಿಂದ ವಿಶ್ರಾಂತಿ ಬೇಕಿತ್ತು ಎಂದು ಹೇಳಿದರು. ಇದೀಗ ಇನ್ನು ಮುಂದೆ ತನಗೆ ಇಷ್ಟವಿಲ್ಲದ ಜನರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ಸಿಟಾಡೆಲ್ ಸಿರಿಸ್ ಸಿಸನ್ 1ರ ಪ್ರಚಾರಕ್ಕಾಗಿ ಪ್ರಿಯಾಂಕಾ ಭಾರತಕ್ಕೆ ಆಗಮಿಸಿದ್ದಾರೆ. ಸಿಟಾಡೆಲ್ ಸಿರಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಆ್ಯಕ್ಷನ್ ಮೋಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ರಿಚರ್ಡ್ ಮ್ಯಾಡೆನ್ ಕೂಡ ಇದರಲ್ಲಿ ನಟಿಸಿದ್ದಾರೆ. ದಿ ರುಸ್ಸೋ ಬ್ರದರ್ಸ್ ರಚಿಸಿದ, ಆಕ್ಷನ್ ಸಿರಿಸ್, ಜಾಗತಿಕ ಬೇಹುಗಾರಿಕಾ ಸಂಸ್ಥೆ ಸಿಟಾಡೆಲ್‌ನ ಇಬ್ಬರು ಗಣ್ಯ ಏಜೆಂಟ್‌ಗಳಾದ ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಮತ್ತು ನಾಡಿಯಾ (ಪ್ರಿಯಾಂಕಾ) ಒಳಗೊಂಡ ಕಥೆಯಾಗಿದೆ.
ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಹಂಚಿಕೊಂಡ ಪ್ರಿಯಾಂಕಾ, ಆ್ಯಕ್ಷನ್ ಸೀನ್ಗಳನ್ನು ಒಳಗೊಂಡಿರುವ ಸಿಟಾಡೆಲ್ ಹಲವು ಸಾಹಸ ದೃಶ್ಯಗಳು ಇದರಲ್ಲಿ ಕಾಣಸಿಗುತ್ತವೆ ಎಂದು ಹೇಳಿದ್ದಾರೆ. 'ಸಿಟಾಡೆಲ್' ಶುಕ್ರವಾರ, ಏಪ್ರಿಲ್ 28 ರಂದು ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ.