ಹಿಂದಿ ಚಿತ್ರೋದ್ಯಮದಿಂದ ವೃತ್ತಿಜೀವನ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಗ್ಲೋಬಲ್ ಐಕಾನ್ ಆಗಿದ್ದಾರೆ. ಹಾಲಿವುಡ್ನಲ್ಲಿ ಮಿಂಚು ಹರಿಸುವ ಮೂಲಕ ಭಾರತೀಯ ಚಿತ್ರರಂಗದ ಗೌರವ ಹೆಚ್ಚಿಸಿದ್ದಾರೆ. ಅಮೆರಿಕನ್ ಗಾಯಕ ನಿಕ್ ಜೋನಾಸ್ ಜೊತೆ ಸುಂದರ ದಾಂಪತ್ಯ ಜೀವನ ನಡೆಸುತ್ತಿದ್ದು, ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಪತಿಗೆ ಎಲ್ಲಾ ವಿಚಾರದಲ್ಲೂ ಸಂಪೂರ್ಣ ಬೆಂಬಲ ನೀಡುವ ಮೂಲಕ ಪ್ರಿಯಾಂಕಾ ಚೋಪ್ರಾ ಆದರ್ಶ ಪತ್ನಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಇವರಿಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾ ಸುತ್ತುವರಿಯುತ್ತಲೇ ಇರುತ್ತದೆ. ಭಾನುವಾರ ರಾತ್ರಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್ ಅವರ LA ಈವೆಂಟ್ (ಸಂಗೀತ ಕಚೇರಿ)ನಲ್ಲಿ ಭಾಗಿಯಾಗಿದ್ದರು. ಇಲ್ಲಿ ಕ್ಲಿಕ್ಕಿಸಲಾದ ಫೋಟೋಗಳನ್ನು ಹಂಚಿಕೊಳ್ಳಲು ನಟಿ ಇನ್ಸ್ಟಾಗ್ರಾಮ್ ವೇದಿಕೆಯನ್ನು ಬಳಸಿಕೊಂಡರು. ಮೂರು ಸುಂದರ ಫೋಟೋಗಳನ್ನು ಪ್ರಿಯಾಂಕಾ ಶೇರ್ ಮಾಡಿದ್ದಾರೆ. ಚಿತ್ರಗಳಿಗೆ 'ಇನ್ಕ್ರೆಡಿಬಲ್ ವೀಕೆಂಡ್' ಎಂದು ಕ್ಯಾಪ್ಶನ್ ನೀಡಿದ್ದಾರೆ. ಕೆಂಪು ಹೃದಯ, ಮಡಿಸಿದ ಕೈಗಳು ಮತ್ತು ಸ್ಟಾರ್ ಎಮೋಜಿಗಳನ್ನು ಅಡಿಬರಹಕ್ಕೆ ಸೇರಿಸಿದ್ದಾರೆ.
ಮೊದಲೆರಡು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಪತಿಯನ್ನು ರೊಮ್ಯಾಂಟಿಕ್ ಲುಕ್ನಲ್ಲಿ ನೋಡುತ್ತಿದ್ದರೆ, ನಿಕ್ ಜೋನಾಸ್ ಕ್ಯಾಮರಾಗೆ ಪೋಸ್ ನೀಡುತ್ತಿದ್ದಾರೆ. ಮೂರನೇ ಚಿತ್ರವು ನಿಕ್ ತಮ್ಮ ಸಹೋದರರಾದ ಜೋ ಮತ್ತು ಕೆವಿನ್ ಜೊತೆ ಪೋಸ್ ನೀಡುತ್ತಿರುವುದನ್ನು ತೋರಿಸುತ್ತದೆ. ಪ್ರಿಯಾಂಕಾ ಅವರು ಉತ್ತಮ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವುದರೊಂದಿಗೆ, ಗಂಡನನ್ನು ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಈ ಬ್ಯೂಟಿಫುಲ್ ವೀಕೆಂಡ್ನಲ್ಲಿ ಮಗಳು ಮಾಲ್ತಿ ಮೇರಿ ಕೂಡ ಜೊತೆಗಿದ್ದಳು.